ಹುಬ್ಬಳ್ಳಿ: ಈತನ ವೃತ್ತಿ ಸ್ಮಶಾನ (ಖಬರಸ್ತಾನ) ಕಾಯುವುದು. ವಯಸ್ಸು 63. ನಿಜಕ್ಕೂ ಬಡಪಾಯಿ. ಈಗ ಈತನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ!
ಹೌದು, ಇದು ಇಲ್ಲಿಯ ಕಮರಿಪೇಟ ತೊರವಿಹಕ್ಕಲ ಖಬರಸ್ತಾನ(ಸ್ಮಶಾನ)ದ ಕಾವಲುಗಾರನಿಗೆ ಬಂದಿರುವ ದಯನೀಯ ಸ್ಥಿತಿ. ಈತನಿಗೆ ಕರೊನಾ ಬಂದಿರುವುದು ಶನಿವಾರ ಖಾತ್ರಿಯಾಗಿದೆ. ಪಿ-363 ಸಂಖ್ಯೆಯ ರೋಗಿಯಾಗಿ ಇಲ್ಲಿಯ ಕಿಮ್ಸ್ಗೆ ದಾಖಲಾಗಿರುವ ಈತ ಬಡವ.
ಮುಲ್ಲಾ ಓಣಿಯ 37 ವರ್ಷದ ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಒಳಪಟ್ಟಿದ್ದೇ ಈತನಿಗೆ ಸೋಂಕು ತಗುಲಲು ಕಾರಣವಾಗಿದೆ. 37 ವರ್ಷದ ವ್ಯಕ್ತಿ ನೀಡಿದ್ದ ಆಹಾರ ಧಾನ್ಯದ ಕಿಟ್ಗೆ ಈತ ಕೈ ಒಡ್ಡಿದ್ದ ಹಾಗೂ ಮಾ. 27ರಂದು ಕಿಟ್ ವಿತರಿಸಲು ಆತನೊಂದಿಗೆ ತೆರಳಿದ್ದ. ಆಗಲೇ ಕರೊನಾ ವೈರಸ್ ಆತನ ದೇಹದಿಂದ 63 ವರ್ಷದ ಈತನ ದೇಹಕ್ಕೆ ಸಂಪರ್ಕಗೊಂಡಿತು ಎಂದು ರ್ತಸಲಾಗಿದೆ.
ಹಲವರಿಗೆ ಆತಂಕ: ಸ್ಮಶಾನ ಕಾಯುವವನಿಗೆ ಸೋಂಕು ತಗಲಿರುವುದು ಕಳೆದ 2-3 ವಾರಗಳಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿ ಮಾರ್ಚ್ 20ರಿಂದ ಏಪ್ರಿಲ್ 17ರವರೆಗೆ 69 ಅಂತ್ಯಕ್ರಿಯೆಗಳು ನಡೆದಿವೆ ಎಂದು ತಿಳಿದು ಬಂದಿದೆ. ಪಾರ್ಥಿವ ಶರೀರಗಳ ಅಂತಿಮ ಕ್ರಿಯಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳು ಕೂಡಲೆ ಕರೊನಾ ಸಹಾಯವಾಣಿ 1077ಕ್ಕೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೊರವಿಹಕ್ಕಲ್ ಖಬರಸ್ತಾನ ಕಾವಲುಗಾರ ನಗರದ 44ನೇ ವಾರ್ಡ್ನ ಕರಾಡಿ ಓಣಿ ನಿವಾಸಿ. ಈತ ಸೋಂಕಿತ ಪಿ- 236 (ಮುಲ್ಲಾ ಓಣಿ ವ್ಯಕ್ತಿ) ಹಾಗೂ ಇತರರ ಜೊತೆಗೂಡಿ ಮಾ. 27ರಂದು ಮುಲ್ಲಾ ಓಣಿಯ ಡಾಕಪ್ಪ ಸರ್ಕಲ್ದಿಂದ ಕಾಳಮ್ಮನ ಅಗಸಿಯವರೆಗೆ ಹಾಗೂ ಕಮರಿಪೇಟೆ, ಆನಂದ ನಗರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ಧಾನ್ಯವನ್ನು ವಿತರಿಸಿರುವುದು ಖಾತ್ರಿಯಾಗಿದೆ. ಆಹಾರ ಧಾನ್ಯ ಪಡೆದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಧಾರವಾಡ ಜಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದು ಭಾವಿಸುತ್ತಿರುವಾಗಲೇ ಹೊಸ ಪ್ರಕರಣ ಪತ್ತೆಯಾಗಿದ್ದು, ಆತಂಕ ಹೆಚ್ಚಲು ಕಾರಣವಾಗಿದೆ.
ಖಬರಸ್ತಾನದಲ್ಲಿ ಶಬ್ ಎ ಬಾರಾತ ಆಚರಣೆ: ಇದೇ ಖಬರಸ್ತಾನದಲ್ಲಿ ಏ. 9ರಂದು ರಾತ್ರಿ ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ವತಿಯಿಂದ ಶಬ್ ಎ ಬಾರಾತ (ಪೂರ್ವಜರ ಸ್ಮರಣೆ) ನಡೆಸಲಾಗಿತ್ತು. ರೂಢಿಯಂತೆ ಅಂದು ಮುಸ್ಲಿಂ ಸಮಾಜದ ಸಾವಿರಾರು ಜನ ಸೇರಬೇಕಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಯಾರೂ ಖಬರಸ್ತಾನಕ್ಕೆ ಹೋಗಬಾರದು, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು, ಸಮಾಜದ ಪರವಾಗಿ ತಾವೂ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಅಂಜುಮನ್ ಎ ಇಸ್ಲಾಂ ಸಂಸ್ಥೆ ಹೇಳಿತ್ತು. ಅದರಂತೆ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಸವಣೂರ, ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಅಬ್ದುಲ್ ಮುನಾಫ್ ದೇವಗಿರಿ, ದಾದಾ ಹಯಾತ್ ಖೈರಾತಿ, ಮೌಲಾನಾ ಅಬ್ದುಲ್ ಅಜೀಜ್ ಉಪಸ್ಥಿತಿಯಲ್ಲಿ ಪ್ರಾರ್ಥನೆ, ಪುಷ್ಪನಮನ ಸಲ್ಲಿಸಲಾಗಿತ್ತು. ‘ಶಬ್ ಎ ಬಾರಾತ ಕಾರ್ಯಕ್ರಮದಲ್ಲಿ 7 ಜನ ಪಾಲ್ಗೊಂಡಿದ್ದೆವು. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೆವು. 6-7 ನಿಮಿಷ ಅಲ್ಲಿದ್ದೆವು. ಕಾವಲುಗಾರ ಬಹಳ ದೂರದಲ್ಲಿ ಇದ್ದ. ಕಾವಲುಗಾರನಿಗೆ ಕರೊನಾ ಸೋಂಕು ದೃಢಪಟ್ಟ ಬಳಿಕ ಅಧಿಕಾರಿಗಳು ನಮ್ಮನ್ನು ಸಂರ್ಪಸಿದ್ದಾರೆ. ಜಿಲ್ಲಾಡಳಿತಕ್ಕೆ ಅಗತ್ಯ ಮಾಹಿತಿ ನೀಡಿದ್ದೇವೆ. ಮುಂದೆಯೂ ಎಲ್ಲ ಸಹಕಾರ ನೀಡಲಿದ್ದೇವೆ. ಖಬರಸ್ತಾನದಲ್ಲಿ ನಡೆಯುವ ಅಂತ್ಯಕ್ರಿಯೆ ವೇಳೆ ಜನರು, ಕಾವಲುಗಾರನ ಸಂಪರ್ಕಕ್ಕೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಅಂತಿಮ ವಿಧಿವಿಧಾನ ನಡೆಸಲು ಪ್ರತ್ಯೇಕ ಮೂರು ಜನ ಇದ್ದಾರೆ’ ಎಂದು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ತಿಳಿಸಿದ್ದಾರೆ.
ಕರಾಡಿ ಓಣಿ ಪ್ರದೇಶ ಸೀಲ್ಡೌನ್: ಹುಬ್ಬಳ್ಳಿಯ ಕಮರಿಪೇಟ ಕರಾಡಿ ಓಣಿ ನಿವಾಸಿಯಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತಕ್ಷಣದಿಂದ 100 ಮೀ. ಅಂತರದವರೆಗಿನ ಪ್ರದೇಶವನ್ನು ಜಿಲ್ಲಾಡಳಿತವು ನಿಯಂತ್ರಿತ ವಲಯವೆಂದು ಘೊಷಿಸಿ ಸಂಪೂರ್ಣ ಸೀಲ್ಡೌನ್ ಮಾಡಿದೆ. ಈ ಪ್ರದೇಶದ ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು. ಪೊಲೀಸರು ಶಾಶ್ವತವಾಗಿ ತಡೆಗೋಡೆ ಹಾಕಿ ನಾಕಾಬಂದಿ ಮಾಡಲಿದ್ದಾರೆ. ಕರ್ಫ್ಯೂ ರೀತಿಯ ವಾತಾವರಣ ಇರಲಿದೆ. ಸಂಪೂರ್ಣ ಲಾಕ್ಡೌನ್ ಖಾತರಿಪಡಿಸಿಕೊಳ್ಳಲು ಪೊಲೀಸರು ಡ್ರೋನ್ಗಳನ್ನು ಬಳಸಲಿದ್ದಾರೆ. ಜನರಿಗೆ ಮೂಲ ಅಗತ್ಯಗಳಾದ ದಿನಸಿ, ಮಾಂಸ, ಹಾಲು, ಅಡುಗೆ ಅನಿಲ, ಔಷಧಗಳನ್ನು ಪೂರೈಸುವವರಿಗೆ ಪೊಲೀಸರು ಪ್ರವೇಶಾತಿ ಹಾಗೂ ನಿರ್ಗಮನ ಪಾಸ್ಗಳನ್ನು ನೀಡಬೇಕು. ಕರ್ತವ್ಯ ನಿರತ ವಾಹನಗಳನ್ನು ಹೊರತು ಪಡಿಸಿ ಇತರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. 100 ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯವರು ಆಹಾರ ಮತ್ತು ಇತರ ಸೇವೆಗಳನ್ನು ಜನರಿಗೆ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತ್ತೆ 99 ಶಂಕಿತರು ಪತ್ತೆ: ಕೆಲ ದಿನಗಳಿಂದ ಧಾರವಾಡ ಜಿಲ್ಲೆಯ ಎಲ್ಲ ವರದಿಗಳು ನೆಗೆಟಿವ್ ಬರುತ್ತಿದ್ದ ಹಿನ್ನೆಲೆಯಲ್ಲಿ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದರು. ಆದರೆ ಶನಿವಾರ ಮತ್ತೊಂದು ಪ್ರಕರಣ ದೃಢಪಡುತ್ತಿದ್ದಂತೆ ಮತ್ತೆ ಆತಂಕ ಶುರುವಾಗಿದೆ. ಹುಬ್ಬಳ್ಳಿ ಕರಾಡಿ ಓಣಿಯ 63 ವರ್ಷದ ಪುರುಷನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಶುಕ್ರವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 99 ಶಂಕಿತ ಸೋಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಶುಕ್ರವಾರ ಇದ್ದ ಒಟ್ಟು 1254 ಶಂಕಿತರ ಸಂಖ್ಯೆ ಶನಿವಾರ 1353ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 847 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 751 ಜನರ ವರದಿ ನೆಗೆಟಿವ್ ಬಂದಿವೆ. 7 ಪ್ರಕರಣದಲ್ಲಿ ಪಾಸಿಟಿವ್ ಕಂಡು ಬಂದಿದ್ದು, 6 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಧಾರವಾಡ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಇನ್ನೂ 90 ಜನರ ವರದಿ ಬರಬೇಕಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 1353 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 626 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ 9 ಜನ ದಾಖಲಾಗಿದ್ದಾರೆ. 59 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 645 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.