ಹಾಸನ: ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಮ್ಯಾನ್ಯುಯಲ್ ಸ್ಕಾವೇಂಜರ್ಸ್ ಸಮೀಕ್ಷೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಸ್ಮಶಾನ ಭೂಮಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರನ್ನು ಗುರುತಿಸಿ ಸಂಖ್ಯಾನುಗುಣವಾಗಿ ಸರ್ಕಾರಕ್ಕೆ ವರದಿ ನೀಡಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಮಶಾನ ನೌಕರರೆ ಇಲ್ಲ, ಇದರ ಕುರಿತಾಗಿ ಅಧಿಕಾಗಳು ಸಮೀಕ್ಷೆ ನಡೆಸಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ನೇರ ಪಾವತಿ ನೀಡಬೇಕು ಎಂದ ಸಚಿವರು, ಮ್ಯಾನ್ಯುಯಲ್ ಸ್ಕಾವೇಂಜರ್ಸ್‌ಗೆ ಗುರುತಿನ ಚೀಟಿ ನೀಡಬೇಕು ಎಂದು ತಿಳಿಸಿದರು.
ಆಯಾ ಜಿಲ್ಲೆಗಳಲ್ಲಿ ಮ್ಯಾನ್ಯುಯಲ್ ಸ್ಕಾವೇಂಜರ್ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಇನ್ನು ಕೆಲವು ಜಿಲ್ಲೆಗಳಲ್ಲಿ ಮ್ಯಾನ್ಯುಯಲ್ ಸ್ಕಾವೇಂಜರ್‌ಗಳೇ ಇಲ್ಲ ಎಂದು ವರದಿ ನೀಡಲಾಗಿದೆ. ಅಂತಹವರು ಪುನಃ ಪಾರದರ್ಶಕತೆಯಿಂದ ಸಮೀಕ್ಷೆ ನಡೆಸಿ ಎಂದರು.
ಜಿಲ್ಲಾಧಿಕಾರಿ ಅರ್ಚನಾ ಮಾತನಾಡಿ, ಜಿಲ್ಲೆಯಲ್ಲಿ ಭಿಕ್ಷುಕರ ಕೇಂದ್ರ ನಿರ್ಮಾಣಕ್ಕಾಗಿ ಈಗಾಗಲೆ ಜಾಗ ಗುರುತಿಸಲಾಗಿದ್ದು, ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಸಂವಾದದಲ್ಲಿ ಸಮಾಜಕಲ್ಯಾಣ ಇಲಾಖೆ ಕಾನೂನು ಸಲಹೆಗಾರ ಜಿ.ವೆಂಕಟಯ್ಯ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಪುನೀತ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಇತರರು ಇದ್ದರು.