ಜಿಲ್ಲೆ

ಸ್ಮಶಾನಕ್ಕೆ ಮೀಸಲಿಟ್ಟ ಜಾಗ ಪ್ರಭಾವಿಗಳಿಗೆ ಮಂಜೂರು ತಹಸೀಲ್ದಾರ್ ಮಾಡಲು ಹುನ್ನಾರ!?

ಶಿಡ್ಲಘಟ್ಟ : ದಲಿತರ ಸ್ಮಶಾನಕ್ಕೆ ಹೊಂದಿಕೊಂಡಿರುವ ಜಾಗವನ್ನು ಪ್ರಭಾವಿಗಳಿಗೆ ಮಂಜೂರು ಮಾಡಿಕೊಡಲು ತಹಸೀಲ್ದಾರ್ ಕೆ.ಅರುಂಧತಿ ಮುಂದಾಗಿದ್ದಾರೆಂದು ಆರೋಪಿಸಿದ ನಗರಸಭೆ ಸದಸ್ಯ ಎನ್.ಕೃಷ್ಣಮೂರ್ತಿ, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.

ತಾಲೂಕು ಕಚೇರಿ ಎದುರು ಶನಿವಾರ ಸಿದ್ಧಾರ್ಥ ನಗರದ ಯುವಕರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿದ್ಧಾರ್ಥ ನಗರದ ದಲಿತರ ಸ್ಮಶಾನದ ಪಕ್ಕದಲ್ಲಿರುವ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡುವಂತೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಅದರಂತೆ ಹಿಂದಿನ ತಹಸೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಜಾಗ ಮಂಜೂರು ಮಾಡುವ ಭರವಸೆ ನೀಡಿದ್ದರು.

ಆದರೆ ಈಗಿನ ತಹಸೀಲ್ದಾರ್ ಅರುಂಧತಿ ಪ್ರಭಾವಿಗಳಿಗೆ ಜಮೀನು ಸ್ವಚ್ಛಗೊಳಿಸಲು ನೀಡಿದ್ದು, ಅವರಿಗೆ ಪೊಲೀಸ್ ಭದ್ರತೆ ನೀಡಲು ಸೂಚಿಸಿದ್ದರು, ಅದರಂತೆ ಶನಿವಾರ ಖಾಸಗಿಯವರು ಜಮೀನು ಸ್ವಚ್ಛಗೊಳಿಸಲು ಮುಂದಾಗಿದ್ದು, ಈ ವೇಳೇ ಸ್ಥಳಕ್ಕೆ ಹೋದ ದಲಿತರ ಮೇಲೆ ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಇದರ ಹಿಂದೆ ಜಾಗವನ್ನು ಪ್ರಭಾವಿಗಳಿಗೆ ಮಂಜೂರು ಮಾಡುವ ಹುನ್ನಾರವಿದ್ದು ಇದೆಲ್ಲಕ್ಕೂ ಕಾರಣಕರ್ತರಾಗಿರುವ ತಹಸೀಲ್ದಾರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ಮುಖಂಡರಾದ ಮುನಿನರಸಿಂಹ, ನಾರಾಯಣಸ್ವಾಮಿ, ಮಂಜುನಾಥ್, ನಾನಿ, ವೆಂಕಟೇಶ್ ಮತ್ತಿತರರು ಹಾಜರಿದ್ದರು.