ಹನೂರು: ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಎಸ್.ದೊಡ್ಡಿ ಗ್ರಾಮಕ್ಕೆ ಮಂಗಳವಾರ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಮಶಾನ ಸೌಕರ್ಯ ಕಲ್ಪಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಿತು.
ಗ್ರಾಮದಲ್ಲಿ ಅ.9ರಂದು ಪುಟ್ಟ ರಾಚಶೆಟ್ಟಿ ಎಂಬವರು ಮೃತಪಟ್ಟಿದ್ದರು. ಆದರೆ ಶವ ಸಂಸ್ಕಾರಕ್ಕೆ ಸ್ಮಶಾನ ಇರಲಿಲ್ಲ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗ್ರಾಮದ ಹರೀಶ್ ಎಂಬವರ ಮನವೊಲಿಸಿ, ಅವರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ತೆರವುಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಜತೆಗೆ ಸ್ಮಶಾನ ಕಲ್ಪಿಸುವಂತೆ ಗ್ರಾಮಸ್ಥರಿಂದ ತೀವ್ರ ಒತ್ತಾಯ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.
ಈ ಹಿನ್ನೆಲೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಮಾದೇಶ್ ಹಾಗೂ ನೌಕರರ ತಂಡ ಗ್ರಾಮಕ್ಕೆ ಭೇಟಿ ನೀಡಿ ಸರ್ವೇ ನಂಬರ್ 15ರ ಸರ್ಕಾರಿ ಜಾಗವನ್ನು ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ದಾಖಲಾತಿಗಳನ್ನು ಪರಿಶೀಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಮಶಾನಕ್ಕೆ ಜಾಗ ಮಂಜೂರಾತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.