ಯಳಂದೂರು: ಮದ್ದೂರು ಗ್ರಾಮದ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಇರುವ ಸುವರ್ಣಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುವ ಸಂಬಂಧ ಮಾಜಿ ಶಾಸಕರಾದ ಎನ್.ಮಹೇಶ್ ಹಾಗೂ ಎಸ್. ಬಾಲರಾಜು ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಇಲ್ಲಿ ಎದೆ ಮಟ್ಟದ ನೀರಿನಲ್ಲೇ ಹೆಣವನ್ನು ಹೊರಬೇಕಾದ ಸ್ಥಿತಿ ಇದೆ ಎಂದು ಈಚೆಗೆ ಗ್ರಾಮಸ್ಥರು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ತಂಡವು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆಯಿತು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಈ ಹಿಂದೆ ನಾನು ಶಾಸಕನಾಗಿದ್ದಾಗ ಸುವರ್ಣಾವತಿ ನದಿಗೆ ಅಡ್ಡಲಾಗಿ 2022ರಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಸೇತುವೆ ನಿರ್ಮಿಸಲು 85 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದು ಸಾಲುವುದಿಲ್ಲ ಎಂದು ಮತ್ತೆ ಇದಕ್ಕೆ 2.40 ಕೋಟಿ ರೂ. ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಮಾಜಿ ಸಚಿವ ಸುರೇಶ್‌ಕುಮಾರ್ ನನಗೆ ಮಾಹಿತಿ ಕೇಳಿದ್ದಾರೆ. ಅವರು ವಿಧಾನಸಭೆಯ ಅರ್ಜಿ ಸಮಿತಿಯ ಸದಸ್ಯರಾಗಿದ್ದು ಈ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿ ಒಂದು ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದ್ದರು. ಹಾಗಾಗಿ ನಾನು ಮಾಜಿ ಶಾಸಕ ಎಸ್.ಬಾಲರಾಜು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಅಲ್ಲದೆ ಎಸಿ, ತಹಸೀಲ್ದಾರ್ ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಬೇಗ ಈ ಅರ್ಜಿಯನ್ನು ಸುರೇಶ್‌ಕುಮಾರ್ ಅವರಿಗೆ ನೀಡಿ ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಮಹೇಶ್ ಹಾಗೂ ಜಯಪ್ರಕಾಶ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು. ಮದ್ದೂರು ಗ್ರಾಮದ ಪರಿಶಿಷ್ಟ ಜಾತಿಯವರು ಸ್ಮಶಾನಕ್ಕೆ ತೆರಳಲು ಅನುಕೂಲವಾಗುವಂತೆ ಸೇತುವೆ ನಿರ್ಮಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಆರ್‌ಡಿಪಿಆರ್, ಪಿಆರ್‌ಇಡಿ ವ್ಯಾಪ್ತಿಗೆ ಇದು ಒಳಪಡುವುದರಿಂದ ಅವರ ಗಮನಕ್ಕೆ ಈ ವಿಷಯ ತರಲಾಗುವುದು ಎಂದು ತಹಸೀಲ್ದಾರ್ ಜಯಪ್ರಕಾಶ್ ಮಾಹಿತಿ ನೀಡಿದರು.