ನಾಗೇನಹಟ್ಟಿಯ ಸ್ಮಶಾನಭೂಮಿಗೆ ಸರ್ವೇ ಅಧಿಕಾರಿಗಳು ಜಾಗ ಗುರುತಿಸಿದ್ದರಿಂದ ಗ್ರಾಮಸ್ಥರು ಮಂಗಳವಾರ ಹದ್ದುಬಸ್ತ್ ಮಾಡಿ ಕಂಬ ನೆಟ್ಟಿರುವುದು. 
ಜಿಲ್ಲೆ

ಸ್ಮಶಾನ ಭೂಮಿ ವಿವಾದ ಸುಖಾಂತ್ಯ

ಹಿರೇಬಾಗೇವಾಡಿ: ಸುಮಾರು ನಲವತ್ತು ವರ್ಷಗಳಿಂದ ಖಾಸಗಿಯವರ ಕಬ್ಜಾದಲ್ಲಿದ್ದ ಬೆಳಗಾವಿ ತಾಲೂಕಿನ ಸಮೀಪದ ನಾಗೇನಹಟ್ಟಿ ಗ್ರಾಮದ ಇಪ್ಪತ್ತು ಗುಂಟೆ ಸ್ಮಶಾನಭೂಮಿ ಜಾಗ ಈಗ ಸಾರ್ವಜನಿಕ ಬಳಕೆಗೆ ಹಸ್ತಾಂತರಗೊಂಡಿದೆ. ನಾಗೇನಹಟ್ಟಿ ಗ್ರಾಮದ ಸರ್ವೇ ನಂಬರ್ 9/6ರಲ್ಲಿನ 2 ಎಕರೆ 18 ಗುಂಟೆ ಪೈಕಿ 20 ಗುಂಟೆ ಸ್ಮಶಾನಭೂಮಿಯೆಂದು ನೋಂದಣಿ ಆಗಿದ್ದ ಜಾಗವನ್ನು ಮೋಹನ ಅಂಗಡಿ ಮತ್ತು ಬಾಳೇಕುಂದ್ರಿ ಕುಟುಂಬದವರು ಕಬ್ಜಾ ಮಾಡಿಕೊಂಡಿದ್ದರು. ಅದನ್ನು ಗ್ರಾಮಕ್ಕೆ ಬಿಟ್ಟು ಕೊಡುವಂತೆ ಗ್ರಾಮಸ್ಥರು 1984ರಿಂದಲೂ ಚರ್ಚೆ ನಡೆಸಿ, ವಿನಂತಿ ಮಾಡಿ ಬೇಸತ್ತಿದ್ದರು. ಅಲ್ಲದೆ ಸರ್ಕಾರಿ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಿಕೊಡಲು ವಿಳಂಬ ತೋರಿದ್ದರು.

ಒಂದೆರಡು ಸಲ ಸರ್ವೇ ಮಾಡಲು ಬಂದಿದ್ದ ಅಧಿಕಾರಿಗಳು ಇತ್ಯರ್ಥ ಮಾಡದೇ ವಾಪಸ್ಸು ಹೋಗಿದ್ದರು. ಆದರೂ ಗ್ರಾಪಂ ಯುವ ಸದಸ್ಯ ನಾರಾಯಣ ಪಾಟೀಲ ಮುಂದಾಳತ್ವದಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ಸ್ಮಶಾನಭೂಮಿ ಪಡೆದೇ ತಿರುವುದಾಗಿ ಟೊಂಕಕಟ್ಟಿ ನಿಂತಿದ್ದರು. ಆ.19ರಂದು ಈರವ್ವ ಹಂಪಣ್ಣವರ ಎಂಬುವರು ತೀರಿಕೊಂಡಾಗಲೂ ಗ್ರಾಮಸ್ಥರಿಗೆ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗಿದೆ.

ಇದರಿಂದಾಗಿ ರೊಚ್ಚಿಗೆದ್ದ ನಾರಾಯಣ ಪಾಟೀಲ ಹಾಗೂ ಗ್ರಾಮಸ್ಥರು ತಹಸೀಲ್ದಾರ್‌ಗೆ ಕರೆ ಮಾಡಿ ಕೂಡಲೇ ಸ್ಮಶಾನಭೂಮಿಯ ಸಮಸ್ಯೆ ಬಗೆ ಹರಿಸದಿದ್ದರೆ ಶವವನ್ನು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದೆದುರು ಇರಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅದಕ್ಕೆ ರಾತ್ರಿ 12.30 ಗಂಟೆಗೆ ನಾಗೇನಹಟ್ಟಿಗೆ ತಹಸೀಲ್ದಾರ್ ಆರ್.ಕೆ.ಕುಲಕರ್ಣಿ ಮತ್ತು ಹಿರೇಬಾಗೇವಾಡಿ ಸಿಪಿಐ ವಿಜಯಕುಮಾರ ಸಿನ್ನೂರ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ ಮೋಹನ ಅಂಗಡಿ ಮತ್ತು ಬಾಳೇಕುಂದ್ರಿ ಕುಟುಂಬದವರೊಡನೆ ಚರ್ಚೆ ನಡೆಸಿ ಅವರ ಮನವೊಲಿಸಿದ್ದಾರೆ.

ಆಗಸ್ಟ್ 23 ರಂದು ಸರ್ವೇ ಮಾಡಿಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದರಿಂದ ಮಾರನೆಯ ದಿನ ಶನಿವಾರ ಶವ ಸಂಸ್ಕಾರ ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಮಂಗಳವಾರ ಗ್ರಾಮಕ್ಕೆ ಹಿರೇಬಾಗೇವಾಡಿ ಪೊಲೀಸರ ಉಪಸ್ಥಿತಿಯಲ್ಲಿ ತೆರಳಿದ ಸರ್ವೇ ಅಧಿಕಾರಿಗಳು ಸದರಿ ಜಮೀನು ಅಳತೆ ಮಾಡಿ 20 ಗುಂಟೆ ಜಾಗವನ್ನು ಸ್ಮಶಾನ ಭೂಮಿಗಾಗಿ ಗುರುತಿಸಿ ಕೊಟ್ಟಿದ್ದಾರೆ. ಅಳತೆ ಮಾಡಿ ಕೊಟ್ಟ ಜಾಗದ ಸುತ್ತ ಗ್ರಾಮಸ್ಥರು ಕಂಬ ನೆಟ್ಟು ಹದ್ದುಬಸ್ತ್ ಮಾಡಿಕೊಂಡಿದ್ದಾರೆ. ಇದರಿಂದ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸ್ಮಶಾನಭೂಮಿ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.