ಜಿಲ್ಲೆ

ಸ್ಮಶಾನ ಜಾಗವನ್ನು ಹೇಗೆ ಖಾಸಗಿಯವರಿಗೆ ಕೊಟ್ರಿ?

ಕಂದಾಯ ಇಲಾಖೆಗೆ ಲೋಕಾ ಪೊಲೀಸ್​ ಅಧೀಕ್ಷಕ ಲಕ್ಷ್ಮೀನಾರಾಯಣ ತರಾಟೆ

ಶಿರಾ: ಸ್ಮಶಾನವನ್ನು ಲೇಔಟ್​ ಮಾಡಕ್ಕೆ ಹೊರಟಿರೋ ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗ್ತಾ ಇದೆ?. ಗ್ರಾಮಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರಿಗೆ ಸಾಮಾನ್ಯ ಜ್ಞಾನ ಇದ್ದರೆ ಈ ರೀತಿಯ ಅವ್ಯವಸ್ಥೆ ಆಗುವುದಿಲ್ಲ. ಸ್ಮಶಾನ ಜಾಗ ನೋಡದೆ ಖಾಸಗಿಯವರಿಗೆ ಹೇಗೆ ಖಾತೆ ಮಾಡಿ ಕೊಟ್ಟಿದ್ದೀರಾ? ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತ ಪೊಲೀಸ್​ ಅಧೀಕ್ಷಕ ಲಕ್ಷ್ಮೀನಾರಾಯಣ ತರಾಟೆಗೆ ತೆಗೆದುಕೊಂಡ ಪರಿ ಇದು.

ಶಿರಾ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು&ಕೊರತೆ ಹಾಗೂ ಅಹವಾಲನ್ನು ಸ್ವೀಕರಿಸಿ ಮಾತನಾಡಿ, ಸಾಮಾನ್ಯ ಜನರು ಖಾತೆಗೆ ಅರ್ಜಿ ಸಲ್ಲಿಸಿದರೆ ಸ್ಥಳ ಪರಿಶೀಲನೆ ಮಾಡಬೇಕೆಂಬ ನೆಪವಡ್ಡಿ ಸತಾಯಿಸುತ್ತೀರಾ. ಆದರೆ ಶಿರಾ ನಗರದ ಕೋಟೆಯ ಬೂದಿಣ್ಣೆ ಸ್ಮಶಾನದ ಜಾಗವನ್ನು ನೋಡದೆ ಹೇಗೆ ಖಾತೆ ಮಾಡಿಕೊಟ್ಟಿರುತ್ತೀರಾ?. ಮೊದಲಿನಿಂದ ಆ ಜಾಗದಲ್ಲಿ ಸಮಾಧಿ ಇದ್ದರೆ ಆ ವಿವರವನ್ನು ಮೇಲಧಿಕಾರಿಗೆ ತಿಳಿಸಬೇಕು. ನೀವು ಮಾಡಿದ

ಸಣ್ಣ ತಪ್ಪು ಇಷ್ಟೆಲ್ಲಾ ಅವ್ಯವಸ್ಥೆಗೆ ಕಾರಣವಾಗಿದೆ ಎಂದು ಹರಿಹಾಯ್ದರು.

ಕಂದಾಯ ಇಲಾಖೆಯಲ್ಲಿ ಹಳೇ ದಾಖಲೆಗಳು ಸಿಗುತ್ತಿಲ್ಲ ಎಂಬ ಸಾರ್ವಜನಿಕರ ದೂರಿಗೆ ಉತ್ತರಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಹಳೇ ತಾಲೂಕ ಕಚೇರಿಯಿಂದ ಹೊಸ ತಾಲೂಕು ಕಚೇರಿಗೆ ದಾಖಲೆಗಳನ್ನು ಸಾಗಿಸುವಾಗ ಕಳೆದು ಹೋಗಿದೆ ಎಂಬ ಉತ್ತರಕ್ಕೆ ಗರಂ ಆದ ಲಕ್ಷ್ಮೀನಾರಾಯಣ, ದಾಖಲೆಗಳನ್ನು ಸಾಗಿಸುವಾಗ ಯಾವ ದಾಖಲೆಗಳಿದ್ದವು ಹಾಗೂ ದಾಖಲೆಗಳನ್ನು ಇನ್ನೊಂದಡೆ ಇಡುವಾಗ ಯಾವ ದಾಖಲೆಗಳು

ಇದ್ದವು ಎಂಬುದನ್ನು ದಾಖಲಿಸಿ ವ್ಯವಸ್ಥೆ ಮಾಡಬೇಕು. ಈ ರೀತಿಯ ಉತ್ತರ ಸರಿ ಇಲ್ಲ. ಆ ಸಮಯದಲ್ಲಿ ಯಾವ ಅಧಿಕಾರಿ ಜವಾಬ್ದಾರಿ ತೆಗೆದುಕೊಂಡಿದ್ದರೂ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಖಾರವಾಗಿ ನುಡಿದರು.

ನಗರಸಭೆ ಮನೆ ನಿಮಾರ್ಣ ವೇಳೆ ಸೆಟ್​ ಬ್ಯಾಕ್​ ಬಿಡುವ ವಿಷಯದಲ್ಲಿ ಹಾಗೂ ನಗರಸಭೆ ಅನುಮತಿ ಇಲ್ಲದೆ ಬಹು ಮಹಡಿ ಕಟ್ಟಡ ಆಗುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಎಂಬ ದೂರಿಗೆ ಅಂತಹ

ಕಟ್ಟಡಗಳನ್ನು ಅನಧಿಕೃತ ಎಂದು ಘೋಷಿಸಿ ಆ ಕಟ್ಟಡಗಳಿಗೆ ನೀರಿನ ಹಾಗೂ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ಎಂದರು. ಕಂದಾಯ ಇಲಾಖೆಗೆ

ಸಂಬಂಧಿಸಿದ 12, ಅರ್ಜಿಗಳು, ಸಿಎಂಸಿ ನಾಲ್ಕು ಹಾಗೂ ತಾಲೂಕು

ಪಂಚಾಯಿತಿ ಮೂರು ಅರ್ಜಿಗಳು ಕುಂದು ಕೊರತೆ ಸಭೆಯಲ್ಲಿ ದಾಖಲಾಗಿವೆ.