ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ಪಠ್ಯಪುಸ್ತಕದ ವಿಷಯ ಮಾತ್ರ ಬೋಧಿಸದೆ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅನ್ವೇಷಣೆಗಳತ್ತ ಆಕರ್ಷಿತ ಆಗುವಂತೆ ಬೋಧಿಸುವ ಕಲೆ ಮತ್ತು ತಂತ್ರವನ್ನು ಶಿಕ್ಷಕರು ಅರಿಯಬೇಕು. ಮಕ್ಕಳಿಗೆ ಸ್ಫೂರ್ತಿದಾಯಕವಾಗುವಂತೆ ಬೋಧಿಸಿದರೆ ಉತ್ತಮ ವಿಜ್ಞಾನಿಗಳನ್ನು ಹುಟ್ಟು ಹಾಕಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅಭಿಪ್ರಾಯಪಟ್ಟರು.
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬಾಲಕಿಯರ ಪ್ರೌಢ ಶಾಲೆಗಳ ಶಿಕ್ಷಕರಿಗೆ ಲ್ಯಾಬ್-ಇನ್-ಎ-ಕಿಟ್ ವಿತರಣೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಇಂತಹ ತರಬೇತಿ ಮತ್ತು ವಿಜ್ಞಾನ ಕಿಟ್‌ಗಳ ಸದುಪಯೋಗ ಪಡೆದು ಕ್ರಿಯಾತ್ಮಕ ಹಾಗೂ ಪರಿಣಾಮಕಾರಿ ಬೋಧನೆಯನ್ನು ಅರ್ಪಣಾ ಮನೋಭಾವದೊಂದಿಗೆ ರೂಢಿಸಿಕೊಳ್ಳಬೇಕು ಎಂದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಆರ್.ಎಫ್. ಭಜಂತ್ರಿ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಬೋಧನೆ ಮಾಡಿದರೆ ಉನ್ನತ ವ್ಯಾಸಾಂಗಕ್ಕೆ ಬರುವ ವಿಜ್ಞಾನ ವಿದ್ಯಾರ್ಥಿಗಳ ಉತ್ತಮ ಸಂಶೋಧನೆಗೆ ಸಹಕಾರಿಯಾಗುತ್ತದೆ. ಎಲ್ಲ ಶಿಕ್ಷಕರು ವಿದ್ಯಾರ್ಥಿಗಳನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಮ್ಯೂಸಿಯಂಗೆ ಕರೆತಂದು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸನ್ನು ಪರಿವರ್ತಿಸಿ ಬೋಧನೆ ಮಾಡಿದರೆ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಬಹುದು. ಶಿಕ್ಷಕರು ಈ ತರಬೇತಿ ಸದುಪಯೋಗ ಪಡೆದು ವಿದ್ಯಾರ್ಥಿಗಳಿಗೆ ತಲುಪಿಸಿದರೆ ಸಾರ್ಥಕವಾಗುತ್ತದೆ ಎಂದರು.