ಕಲಬುರಗಿ: ರಾಜ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಹಾಗೂ ಉಪನ್ಯಾಸಕರ ಸಂಘದಿಂದ ಸೋಮವಾರ ಬೆಳಗ್ಗೆ 10ಕ್ಕೆ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಜಗತ್ತಿನ ಅತ್ಯಂತ ಕಿರಿಯ ಮುಖ್ಯೋಪಾಧ್ಯಾಯ ಬಾಬರ್ ಅಲಿ ಅವರ ಸ್ಫೂರ್ತಿ ಕಿರಣ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ್ ತಿಳಿಸಿದರು.
ಪಿಯು ಜತೆಗೆ ಪ್ರೌಢಶಾಲೆ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ವಿಶ್ವದ ಅತಿ ಕಿರಿಯ ಮುಖ್ಯ ಶಿಕ್ಷಕ, ಪಶ್ಚಿಮ ಬಂಗಾಳದ ಬಾಬರ್ ಅಲಿ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿಡಿಪಿಯು ಶಿವಶರಣಪ್ಪ ಮುಳೆಗಾಂವ್, ರಾಜ್ಯ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಮಲ್ಲಪ್ಪ, ದಿಶಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಾನಂದ ಖಜೂರ್ಗಿ, ಅಲ್ ಶಾಹಿರೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಗುಲಾಂ ರಬ್ಬಾನಿ, ಎಸ್‌ಜಿಎನ್ ಪಿಯು ಕಾಲೇಜು ಸಂಸ್ಥಾಪಕ ಶಿವರಾಜ ಶೀಲವಂತ, ಶಿವಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್. ಹಂಚಿನಾಳ, ಶೀಗುರು ಪಿಯು ಕಾಲೇಜು ಕಾರ್ಯದರ್ಶಿ ನಿತೀನ್ ನಾಯ್ಕ್, ಆರ್.ಜೆ. ಪಿಯು ಕಾಲೇಜು ಪ್ರಾಚಾರ್ಯ ಡಾ.ಪ್ರಹ್ಲಾದ್ ಭುರ್ಲಿ, ಪ್ರಾಚಾರ್ಯ ಜೆ.ಶೇಖ್ ಮುಖ್ಯ ಅತಿಥಿಗಳಾಗಿರುವರು ಎಂದರು. ಜೆ.ಮಲ್ಲಪ್ಪ, ಮಹ್ಮದ್ ಅಲ್ಲಾವುದ್ದೀನ್ ಸಾಗರ, ಬಸವರಾಜ ಬಿರಾಜದಾರ್ ಇತರರಿದ್ದರು.