ಬಳ್ಳಾರಿ ನಗರದ ಪ್ರಧಾನ ಅಂಚೆ ಕಚೇರಿ ಸ್ಥಳಾಂತರಿಸದಂತೆ ಹಾಗೂ ಸ್ಪೀಡ್ ಪೋಸ್ಟ್ ಸಾರ್ಟಿಂಗ್ ವ್ಯವಸ್ಥೆ ಮುಂದುವರೆಸುವಂತೆ ಒತ್ತಾಯಿಸಿ, ಇಲ್ಲಿನ ಕೋಟೆ ಪ್ರದೇಶದ ಅಂಚೆ ಸೂಪರಿಡೆಂಟ್ ಅಧಿಕಾರಿ ವಿ.ಎಲ್.ಚಿತಕೋಟೆ ಅವರಿಗೆ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅ್ಯಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ ಮಾತನಾಡಿ, ಭಾರತ ಸರ್ಕಾರದ ಅಂಚೆ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಸಾರ್ಟಿಂಗ್ ಆಫೀಸ್‌ನಲ್ಲಿ ಸಾಮಾನ್ಯ ಪತ್ರಗಳು, ರಿಜಿಸ್ಟರ್, ಸ್ಪೀಡ್ ಪೋಸ್ಟ್ ಮತ್ತು ಪಾರ್ಸಲ್‌ಗಳನ್ನು ಜಿಲ್ಲೆಯ ಜನತೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವು ದಿನಗಳಿಂದ ಪಾರ್ಸಲ್ ಸಾರ್ಟಿಂಗ್ ವ್ಯವಸ್ಥೆ ತೆಗೆದುಹಾಕಲಾಗಿದೆ. ಕಚೇರಿಯಲ್ಲಿ ಕೇವಲ ಬುಕಿಂಗ್ ಮಾತ್ರವಿದ್ದು, ಸಾರ್ಟಿಂಗ್ ಇಲ್ಲದಿರುವುದರಿಂದ ಗ್ರಾಹಕರು ಕಳುಹಿಸಿದ ಪಾರ್ಸಲ್‌ಗಳು ಬೇರೆ ಸ್ಥಳಗಳಿಗೆ ತಡವಾಗಿ ತಲುಪುತ್ತಿದೆ. ಪುನಃ ಪಾರ್ಸಲ್ ವ್ಯವಸ್ಥೆ ಪ್ರಾರಂಭಿಸಬೇಕು. ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲೆಯ ಸ್ಪೀಡ್ ಪೋಸ್ಟ್ ಸಾರ್ಟಿಂಗ್ ವ್ಯವಸ್ಥೆ ಸ್ಥಳಾಂತರಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಸದಸ್ಯರಾದ ಬಿ.ಎಂ.ಎರ‌್ರಿಸ್ವಾಮಿ, ಜಿ.ನೀಲಕಂಠಪ್ಪ, ಕೆ.ಎಂ.ಕೊಟ್ರೇಶ್, ಎಂ.ಲೋಕನಾಥ ಸ್ವಾಮಿ, ಬಿ.ಎಂ.ಬಸವರಾಜ ಸ್ವಾಮಿ, ವಿ.ಸೂರ್ಯ ಪ್ರಕಾಶ, ಕೊಳೂರು ಚಂದ್ರಶೇಖರ ಗೌಡ ಇದ್ದರು.