ಜಿಲ್ಲೆ

ಸ್ಪಷ್ಟ-ಪ್ರಾಮಾಣಿಕ ದಾರಿಯನ್ನು ಶೋಧಿಸಬೇಕು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಾಮಾಜಿಕ ಬದ್ಧತೆಯುಳ್ಳವರು ಎಂದು ಘೊಷಣೆ ಮಾಡಿಕೊಂಡ ಸಾಹಿತಿಗಳು ಈಗ ಎಲ್ಲಿದ್ದಾರೆ ? ಅವರು ಮಾಡಿದ ತಪ್ಪನ್ನು ಸರಿಯಾಗಿ ಅರಿತುಕೊಂಡು ನಾವಿಂದು ಸ್ಪಷ್ಟ ಹಾಗೂ ಪ್ರಾಮಾಣಿಕ ದಾರಿಯನ್ನು ಶೋಧಿಸಬೇಕಾಗಿದೆ ಎಂದು ಕವಿ, ಭಾಷಾ ಶಾಸ್ತ್ರಜ್ಞ ಡಾ. ರಂಗನಾಥ ಕಂಟನಕುಂಟೆ ಕರೆ ನೀಡಿದರು.

ಹುಬ್ಬಳ್ಳಿ ಕಾಳಿದಾಸನಗರದ ನಾಗಸುಧೆ ಜಗಲಿಯಲ್ಲಿ ಧಾರವಾಡ ಜಿಲ್ಲಾ ಕಸಾಪ, ಹುಬ್ಬಳ್ಳಿ ತಾಲೂಕು ಕಸಾಪ ಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ನಾಗಸುಧೆ ದತ್ತಿ ಕಾರ್ಯಕ್ರಮದಲ್ಲಿ ಕಾವ್ಯ ಮತ್ತು ಸಾಮಾಜಿಕ ಬದ್ಧತೆ ಕುರಿತು ಮಾತನಾಡಿದ ಅವರು, ಇಂದು ನಾವು ಬರೆಯುವುದೇ ಬೇರೆ, ಬದುಕುವುದೇ ಬೇರೆ ಎಂಬಂತಾಗಿದೆ. ಬದ್ಧತೆಯಿಂದ ಏನಾದರೂ ಮಾಡಲು ನಾಲ್ಕು ಜನ ಒಂದಾಗುವ ತೀವ್ರ ಒತ್ತಡ ಇಂದಿನದು ಎಂದರು.

ಬದ್ಧತೆಯೆಂಬುದು ಪತ್ರಿಕೆಯ ಹೇಳಿಕೆಯೇ ಅಥವಾ ಅನುಸರಿಸಬೆಕಾದ ಮೌಲ್ಯವೇ ? ಇದು ಕವಿಗಳ ಮೂಲಭೂತ ಪ್ರಶ್ನೆಯಾಗಬೇಕು. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಬಂಧಿಯಾಗಿರುವ ನಾವುಗಳು ಪರಸ್ಪರ ಬೆಸೆಯದಂತೆ ನೋಡಿಕೊಳ್ಳಲು ಇಂದು ಎಐ (ಕೃತಕ ಬುದ್ಧಿಮತ್ತೆ) ಬಂದಿದೆ. ಅದು ಮೇಲಿರುವ ದಣಿಗಳಿಗೆ ಸಂದೇಶ ಮುಟ್ಟಿಸಿ ನಮ್ಮನ್ನು ನಿಯಂತ್ರಿಸುತ್ತಿದೆ ಎಂದು ಅಭಿಪ್ರಾಯಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಮಹಾಂತಪ್ಪ ನಂದೂರ, ನಿರ್ಮಲಾ ಶೆಟ್ಟರ್, ರಂಜಾನ ಕಿಲ್ಲೇದಾರ, ಚಿದಾನಂದ ಕಮ್ಮಾರ, ಭಾಗ್ಯಜ್ಯೋತಿ ಗುಡಗೇರಿ, ತೇಜಾವತಿ ಎಚ್. ಡಿ. ಕವಿತೆಗಳನ್ನು ವಾಚಿಸಿದರು.</p><p>ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಉದ್ಘಾಟಿಸಿದರು. ಪ್ರಕಾಶ ಕಡಮೆ ಸ್ವಾಗತಿಸಿದರು. ಪ್ರೊ.ಕೆ. ಎಸ್ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಸುನಂದಾ ಕಡಮೆ ವಂದಿಸಿದರು. ವಿರುಪಾಕ್ಷ ಕಟ್ಟಿಮನಿ ನಿರೂಪಿಸಿದರು. ಅರುಣಕುಮಾರ ಹಬ್ಬು, ಗೋವಿಂದ ಹೆಗಡೆ, ಲಿಂಗರಾಜ ಧಾರವಾಡಶೆಟ್ಟರ್, ವೆಂಕಟೇಶ ಮರೆಗುದ್ದಿ, ಗಾಯತ್ರಿ ರವಿ, ಇತರರು ಇದ್ದರು.