ಮೈಸೂರು: ನಾವಷ್ಟೇ ಸ್ಮಾರ್ಟ್ ಇದ್ದರೆ ಸಾಲದು. ನಮ್ಮ ಗುರಿ ಸಹ ಸ್ಮಾರ್ಟ್ ಆಗಿರಬೇಕು. ಗೊಂದಲವಿಲ್ಲದ ಸ್ಪಷ್ಟತೆ, ನಿಖರತೆ, ವಾಸ್ತವಿಕತೆಯ ಗುರಿ ಇಟ್ಟುಕೊಳ್ಳಬೇಕು. ಅದರ ಯಶಸ್ಸಿಗೆ ಕಠಿಣ ಪರಿಶ್ರಮ ಹಾಕಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾನಸ ಯುವ ಸಂವರ್ಧನೆ-2025’ ಔದ್ಯೋಗಿಕ ಮತ್ತು ಯುವ ಸಬಲೀಕರಣ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಜ್ವಲ ಜೀವನ ನಿರ್ಮಾಣದ ಅವಕಾಶ ಮತ್ತು ಜೀವನ ನಿರ್ನಾಮದ ಅವಕಾಶಗಳೆರಡು ವ್ಯಕ್ತಿಯ ಕೈಯಲ್ಲೇ ಇರುತ್ತದೆ. ಗುರಿಯಷ್ಟೇ ಅಲ್ಲ, ಅದನ್ನು ಸಾಧಿಸುವ ದಾರಿಯೂ ಅಷ್ಟೇ ಮುಖ್ಯ. ಒಳ್ಳೆಯದಕ್ಕೆ ಒಂದೇ ದಾರಿ. ಕೆಟ್ಟದಕ್ಕೆ ನೂರಾರು ದಾರಿಗಳು. ಇದರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಜೀವನ ರೂಪಗೊಳ್ಳುತ್ತದೆ ಎಂದರು.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲ ತಾಣದಲ್ಲಿ ಎಷ್ಟು ಜನ ಫಾಲೋವರ್‌ಗಳಿದ್ದಾರೆ ಎಂಬುದು ಮುಖ್ಯವಲ್ಲ. ಎಷ್ಟು ಪುಸ್ತಕ ಓದಿದ್ದೇವೆ ಎಂಬುದು ಮುಖ್ಯ. ಆದ್ದರಿಂದ ಮೊಬೈಲ್ ಸಂಸ್ಕೃತಿ ಬಿಟ್ಟು, ಪುಸ್ತಕ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು ಎಂದರು.
ಜ್ಞಾನವೇ ಶಕ್ತಿ. ಅದನ್ನು ಪಡೆಯಲು ಮೊಬೈಲ್ ಬಿಟ್ಟು ಪುಸ್ತಕದ ಮೇಲಿನ ಪ್ರೀತಿ ಬೆಳೆಸಿಕೊಳ್ಳಬೇಕು. ಯಾರಿಗೆ ಪುಸ್ತಕದ ಮೇಲೆ ಒಲವು ಇದೆಯೋ ಅವರು ಸಾಧನೆ ಮಾಡಲು ಸಾಧ್ಯ. ಪುಸ್ತಕವನ್ನು ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಿಲ್ಲ ಎಂದರು.
ವ್ಯಕ್ತಿಯ 75 ವರ್ಷದ ಜೀವಿತಾವಧಿಯಲ್ಲಿ ದಿನಕ್ಕೆ 8 ಗಂಟೆಯಂತೆ ಲೆಕ್ಕ ಹಾಕಿದರೂ 25 ವರ್ಷ ಮಲಗಿರುತ್ತಾನೆ. ಬಾಲ್ಯ, ಯೌವನದಲ್ಲೇ 25 ವರ್ಷ ಹಾಗೇ ಕಳೆದು ಹೋಗುತ್ತದೆ. ಉಳಿದ 25 ವರ್ಷ ಮಾತ್ರ ಗುಣಮಟ್ಟದ ಬದುಕು. ಆದ್ದರಿಂದ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕಳೆದ ಹೋದ ಸಮಯ, ದಿನ ಮತ್ತೆ ಬರುವುದಿಲ್ಲ. ಸಮಯದ ಮಹತ್ವ, ಮೌಲ್ಯವನ್ನು ಅರಿತು ನಿಗದಿತ ಅವಧಿಯಲ್ಲೇ ಗುರಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವರ್ಷವಿಡೀ ಓದಿದ್ದ ಪಠ್ಯಕ್ರಮವನ್ನು ಮೂರು ತಾಸಿನ ಪರೀಕ್ಷೆಯಲ್ಲಿ ಬರೆದು 100 ಅಂಕ ತೆಗೆಯುವುದು ದೊಡ್ಡದಲ್ಲ. ಜೀವನದಲ್ಲಿ ಉತ್ತಮ ಅಂಕ ಗಳಿಸುವುದು ಮುಖ್ಯ. ನಿಜ ಜೀವನದಲ್ಲಿ ಪಠ್ಯಕ್ರಮ ಇರುವುದಿಲ್ಲ. ಉತ್ತರ ಪತ್ರಿಕೆಯನ್ನು ಶಿಕ್ಷಕ 5 ನಿಮಿಷದಲ್ಲೇ ಮೌಲ್ಯಮಾಪನ ಮಾಡುತ್ತಾರೆ. ಆದರೆ, ಜೀವನದಲ್ಲಿ ನೂರಾರು ಜನರು ಮೌಲ್ಯಮಾಪನ ಮಾಡುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಸಂಸ್ಕಾರ ಕಲಿಕೆಗೆ ವಿದ್ಯೆ ಬಹಳ ಮುಖ್ಯ. ಅದಕ್ಕಾಗಿ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಬರೀ ಪಠ್ಯಪುಸ್ತಕಕ್ಕೆ ಮಾತ್ರ ಸಿಮೀತವಾಗಬಾರದು. ಉತ್ತಮ ಪುಸ್ತಕಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಬೇಕು. ಆರೋಗ್ಯದ ಕಡೆ ಗಮನ ನೀಡಬೇಕು. ಹಾಗೆ ಗುರಿಯ ಕಡೆಯು ಗಮನ ನೀಡಬೇಕು ಎಂದು ಹೇಳಿದರು.
ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಇದ್ದರು.