ನಿಪ್ಪಾಣಿ: ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಸ್ಪಷ್ಟ ಗುರಿ ಹೊಂದುವ ಮೂಲಕ ಜೀವನದಲ್ಲಿ ಮುನ್ನಡೆಯಬೇಕು. ಗುರಿ ಸಾಧಿಸಲು ದೈನಂದಿನ ಯೋಜನೆ ಮತ್ತು ಅದರ ಅನುಷ್ಠಾನ ಮುಖ್ಯ ಎಂದು ಬೆಳಗಾವಿಯ ಫಾರ್ಚೂನ್ ಬ್ರೇವ್ ಸಂಸ್ಥಾಪಕ ಪ್ರವೀಣ ಹೇಳಿದರು.
ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿಐ ಬಾಗೇವಾಡಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಈಗ ಎಲ್ಲೆಡೆ ಸ್ಪರ್ಧೆ ಹೆಚ್ಚಾಗಿದ್ದು, ಆತ್ಮವಿಶ್ವಾಸ, ನಿಷ್ಠೆ ಮತ್ತು ನಿರಂತರ ಪರಿಶ್ರಮವೇ ಯಶಸ್ಸಿಗೆ ಮುನ್ನುಡಿ. ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ, ಸಂಪರ್ಕ ಕೌಶಲ ಹಾಗೂ ಸಾಮಾನ್ಯ ಜ್ಞಾನ ಮುಖ್ಯವಾಗಿ ಬೇಕಾದ ಅಸ್ತ್ರಗಳಾಗಿದ್ದು, ವೈಫಲ್ಯಗಳಿಂದಲೂ ಪಾಠ ಕಲಿಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ.ಎಂ. ಹುರಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಅಗತ್ಯ ಎಂದರು.
ವಿಶ್ವವಿದ್ಯಾಲಯದ ರ‍್ಯಾಂಕ್ ವಿಜೇತರು, ಯೂನಿವರ್ಸಿಟಿ ಬ್ಲೂ ಹಾಗೂ ಕಾಲೇಜಿನ ಕ್ರೀಡಾಸಾಧಕರು, ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ನರೋವರ್, ರೇಂಜರ್ ವಿಭಾಗದ ಉತ್ತಮ ನಾಯಕರನ್ನು ಸತ್ಕರಿಸಲಾಯಿತು. ೫ನೇ ಸೆಮಿಸ್ಟರ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ನಗದು ಬಹುಮಾನ ವಿತರಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ ಬಾಗೇವಾಡಿ, ಕ್ರೀಡಾ ಒಕ್ಕೂಟದ ಉಪಾಧ್ಯಕ್ಷೆ ಮಂಜುಳಾ ಕೆ., ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷ ಡಾ. ಎಸ್.ಎಂ. ರಾಯಮಾನೆ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್. ಕುಂಬಾರ, ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ಶಿವಲಿಂಗ ನಾಯಿಕ, ಪ್ರೊ. ಶಂಕರಮೂರ್ತಿ ಕೆ.ಎನ್., ನಮಿತಾ ನಾಯಿಕ, ಆರ್. ಮೋನಿಕಾ, ವಿದ್ಯಾರ್ಥಿಗಳ ಪ್ರಧಾನ ಕಾರ್ಯದರ್ಶಿ ಸಂಕಲ್ಪ ಚೌಗಲೆ ಹಾಗೂ ಪ್ರಾಧ್ಯಾಪಕರಿದ್ದರು.