ಜಿಲ್ಲೆ

ಸ್ಪಷ್ಟ ಕನ್ನಡ ಕಲಿಕೆಗಾಗಿ ಶಿಕ್ಷಕರಿಗೆ ತರಬೇತಿ

ಮೈಸೂರು: ಮಕ್ಕಳಿಗೆ ಕನ್ನಡವನ್ನು ಸ್ವಚ್ಛ ಹಾಗೂ ನಿರರ್ಗಳವಾಗಿ ಬರೆಯಲು, ಓದಲು ಅನುಕೂಲವಾಗುವಂತೆ ಆವಿಷ್ಕರಿಸಿರುವ ವಿನೂತನ ಪದ್ಧತಿಯನ್ನು ಪರಿಚಯಿಸಿಕೊಡುವ ಉದ್ದೇಶದಿಂದ ಡಿ.17ರಂದು ಶಿಕ್ಷಕರಿಗೆ ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ದಿ ಕೋಡಿಂಗ್ ಫೋನಿಕ್ಸ್ ಅಕಾಡೆಮಿ ಇಂಡಿಯಾದ ಸಿಇಒ ಡಾ.ರಜನಿರಾವ್ ತಿಳಿಸಿದರು.
ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿ ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಎಸ್.ಎ. ರಾಮದಾಸ್ ಉದ್ಘಾಟಿಸಲಿದ್ದಾರೆ. ಬಿಇಒ ರಾಮಾರಾಧ್ಯ, ಬಿಆರ್‌ಸಿ ಶ್ರೀಕಂಠಸ್ವಾಮಿ ಇತರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಸಕ್ತಿದಾಯಕವಾಗಿ ಕನ್ನಡ ಕಲಿಸಲು ಯಾವುದೇ ನೂತನ ವಿಧಾನ ಇಲ್ಲದಿದ್ದರಿಂದ ನಗರ ಪ್ರದೇಶದ ಮಕ್ಕಳು ಕನ್ನಡದಲ್ಲಿಯೇ ಅನುತ್ತೀರ್ಣರಾಗುತ್ತಿದ್ದಾರೆ. ಹಾಗಾಗಿ ಕನ್ನಡದಲ್ಲಿ ಧ್ವನಿಶಬ್ಧ (ಫೋನಿಕ್ಸ್) ಮೂಲಕ ಸ್ಪಷ್ಟವಾಗಿ ಉಚ್ಚಾರಣೆ, ಓದು, ಬರಹ ತಿಳಿಸಿಕೊಡಲು ಈ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.
ಸ್ವರಮಾಲೆ, ಹ್ರಸ್ವಸ್ವರ, ದೀರ್ಘಸ್ವರ, ಯೋಗವಾಹಕ, ಅರ್ಧ ಅಕ್ಷರಗಳು, ಖಾಲಿ ಅಕ್ಷರ, ವ್ಯಂಜನಗಳು, ಅಲ್ಪಪ್ರಾಣ, ಮಹಾಪ್ರಾಣ, ಅನುನಾಸಿಕ, ವ್ಯಂಜನ ವರ್ಗಗಳು, ಕಾಗುಣಿತಾಕ್ಷರಗಳು, ಸ್ವಜಾತಿ, ವಿಜಾತಿ ಒತ್ತಾಕ್ಷರಗಳು, ಚಿಹ್ನೆ ನಿಯಮ ಇನ್ನಿತರ ವಿಷಯವನ್ನು ಮೂರು ಹಂತದಲ್ಲಿ ತಿಳಿಸಿಕೊಡಲಾಗುವುದು ಎಂದರು.
ಏಳು ವರ್ಷದ ವೇಳೆಗಾಗಲೇ ಮಕ್ಕಳಿಗೆ ಸುಲಭವಾಗಿ ಯಾವುದೇ ಭಾಷೆ ಓದಲು, ಬರೆಯಲು ಬರಬೇಕೆಂಬ ಶಿಕ್ಷಣ ನೀತಿಯಿದೆ. ಆದರೆ ಪ್ರೌಢಶಾಲೆಗೆ ಬಂದರೂ ಶೇ.90ರಷ್ಟು ಮಕ್ಕಳು ಸುಲಭವಾಗಿ ಓದಲು, ಬರೆಯಲು, ಸ್ಪಷ್ಟ ಉಚ್ಚಾರಣೆ ಅಸಾಧ್ಯವಾಗಿರುವುದಾಗಿ ಕೀಳರಿಮೆ ಹೊಂದಿದವರಾಗಿದ್ದಾರೆ. ಇವರಿಗೆ ಕಲಿಸುವುದು ಹೇಗೆ ಎಂದು ಬಿ.ಇಡಿ, ಡಿ.ಇಡಿ, ಎನ್‌ಟಿಟಿ ಮೊದಲಾದ ವ್ಯಾಸಂಗದ ವೇಳೆ ಆವಿಷ್ಕಾರಕವಾಗಿ ಕಲಿಸದಿರುವುದೇ ಸಮಸ್ಯೆಯಾಗಿದೆ. ಅದಕ್ಕಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕರೆ ಗೋಪಾಲ್, ದಿ ಕೋಡಿಂಗ್ ಫೋನಿಕ್ಸ್ ಅಕಾಡೆಮಿ ಇಂಡಿಯಾದ ರೇಖಾ ಇದ್ದರು.