ಚಿತ್ರದುರ್ಗ: ಕುಷ್ಠರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಜಿಲ್ಲಾದ್ಯಂತ ಜ.30 ರಿಂದ ಫೆ.13ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಂಡಿದೆ ಎಂದು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಒ. ನಾಗರಾಜ್ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಬಳಿ ಗುರುವಾರ ಹಮ್ಮಿಕೊಂಡಿದ್ದ ಕುಷ್ಠರೋಗ ಜಾಗೃತಿ ಅಭಿಯಾನ ಜಾಥಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಆಂದೋಲನದ ಉದ್ದೇಶವಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರನ್ನೊಳಗೊಂಡು ಅರಿವು ಕಾರ್ಯಕ್ರಮದ ನಂತರ 15 ದಿನಗಳ ಕಾಲ ಪ್ರತಿ ಮನೆಗೂ ಭೇಟಿ ನೀಡಿ ಕುಷ್ಠರೋಗ ಸಮೀಕ್ಷೆ ನಡೆಸಲಾಗುವುದು. ರೋಗದ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಡಿಚ್‌ಒ ರೇಣುಪ್ರಸಾದ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಸಿ.ಒ. ಸುಧಾ,ಡಾ.ಜಿ.ಒ. ನಾಗರಾಜ್, ಡಾ. ಕಾಶಿ ಜಾಥಾಕ್ಕೆ ಚಾಲನೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾಸ್ಪತ್ರೆಯಿಂದ ಆರಂಭವಾದ ಜಾಥಾ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಎಸ್‌ಜೆಎಂ ಡೆಂಟಲ್ ಕಾಲೇಜ್ ಬಳಿಯಿಂದ ಸಾಗಿ ಮದಕರಿ ನಾಯಕ ವೃತ್ತದ ಬಳಿ ಸಮಾಪನಗೊಂಡಿತು. ಭಾರತೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥ ಡಾ. ಮಹುವ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ.ಟಿ. ತಿಪ್ಪೇಸ್ವಾಮಿ, ಚಂದ್ರಣ್ಣ, ಕಿರಣ್, ಮಂಜುನಾಥ್, ರಾಜೇಂದ್ರ ಪ್ರಸಾದ್, ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜುನಾಥ್ ಇತರರು ಇದ್ದರು.