ರಾಜೇಶ್ ಎಸ್.ಜಿ. ಮುಕ್ಕೇನಹಳ್ಳಿ
ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಆದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರಿಂದ ಆ ವಾರ್ಡ್‌ನಿಂದ ಆಯ್ಕೆ ಬಯಸಿ ಸಲ್ಲಿಸಿದ್ದ ನಾಮಪತ್ರವೂ ತಿರಸ್ಕೃತಗೊಂಡಿದೆ. ಆದ್ದರಿಂದ, ಮತದಾರರ ಪಟ್ಟಿಯ ದೋಷ ಸರಿಪಡಿಸಿ, ಸ್ಪರ್ಧಿಸುವ ಹಕ್ಕು ಕೊಡಿಸುವಂತೆ ಡಿ.ಆರ್.ಧ್ರುವಕುಮಾರ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಗೆ ಸೆ.3ರಂದು ಚುನಾವಣೆ ನಿಗದಿಯಾಗಿದೆ. ವಾರ್ಡ್ 11ರ ಕರೇನಹಳ್ಳಿ ಬಿಸಿಎಂ ಎ ವರ್ಗಕ್ಕೆ ಮೀಸಲು ಕ್ಷೇತ್ರದಿಂದ ಕರೇನಹಳ್ಳಿಯ ನಿವಾಸಿ ಧ್ರುವಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ನಗರಸಭೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಎಂಬ ಕಾರಣಕ್ಕಾಗಿ ಚುನಾವಣಾಧಿಕಾರಿಗಳು ನಾಮಪತ್ರ ತಿರಸ್ಕರಿಸಿದ್ದಾರೆ. ಸೂಚಕರ ಹೆಸರೂ ಪಟ್ಟಿಯಲ್ಲಿ ಕಾಣಿಸುತ್ತಿಲ್ಲವಾದ್ದರಿಂದ ತಿರಸ್ಕರಿಸುತ್ತಿರುವುದಾಗಿ ಷರಾ ಬರೆದಿದ್ದಾರೆ.
ಧ್ರುವಕುಮಾರ್ ಅವರು ಆ.26ರಂದು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, 2018ರ ಮತದಾರ ಪಟ್ಟಿಯನ್ವಯ ನಾಮಪತ್ರ ಸ್ವೀಕೃತಗೊಳಿಸುವಂತೆ ಹಾಗೂ ಮತದಾನ ಮಾಡಲು ಅವಕಾಶ ನೀಡುವಂತೆ ಚುನಾವಣಾಧಿಕಾರಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ದಾವೆಯು ಶುಕ್ರವಾರ (ಆ.27) ವಿಚಾರಣೆಗೆ ಬರಲಿದೆ ಎಂದು ಧ್ರುವಕುಮಾರ್ ತಿಳಿಸಿದ್ದಾರೆ.
ನಗರಸಭೆ ಅಧಿಕಾರಿಗಳ ಎಡವಟ್ಟು: ನಗರಸಭೆ ಅಧಿಕಾರಿಗಳ ಎಡವಟ್ಟಿನಿಂದ ಇದೇ ವಾರ್ಡಿನ 1,500ಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಧ್ರುವಕುಮಾರ್ ಆರೋಪಿಸಿದ್ದಾರೆ. ಅಧಿಕಾರಿಗಳ ಎಡವಟ್ಟಿನ ಬಗ್ಗೆ ಹೈಕೋರ್ಟ್‌ನಲ್ಲಿ 2019 ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿ, 2018ರ ಮತದಾರ ಪಟ್ಟಿಯಂತೆ ಮತದಾನ ಮಾಡಲು ಅವಕಾಶ ಕೊಡುವಂತೆ ಮನವಿ ಮಾಡಿಕೊಂಡಿದ್ದೆವು. ವಿಚಾರಣೆ ನಡೆಸಿದ್ದ ನ್ಯಾಯಾಲಯ, 2018ರ ಮತಪಟ್ಟಿಯಲ್ಲಿದ್ದ 1,554 ಮತದಾರರ ಹೆಸರನ್ನು ಪಟ್ಟಿಗೆ ಸೇರಿಸುವಂತೆ 2021ರ ಆ.4ರಂದು ಆದೇಶ ನೀಡಿತ್ತು. ಈ ಆದೇಶದ ಪ್ರತಿಯನ್ನು ಚುನಾವಣಾ ಆಯೋಗ, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರಿಗೆ ನೀಡಿ, ಹೆಸರು ಸೇರ್ಪಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ, ಯಾರೊಬ್ಬರೂ ಗಮನಹರಿಸಿಲ್ಲ ಎಂದು ಬೇಸರಿಸಿದರು.
ಎಲ್ಲೂ ಮತದಾನಕ್ಕೆ ಅವಕಾಶವಿಲ್ಲ: ಕರೇನಹಳ್ಳಿಯ ವಾರ್ಡ್ ನಲ್ಲಿ ಒಟ್ಟು 2,554 ಮತದಾರದಿದ್ದು, ನಗರಸಭೆಗೆ ಗಡಿ ಗುರುತಿಸಲು ಮುಂದಾದ ಅಧಿಕಾರಿಗಳು ಕರೇನಹಳ್ಳಿಯ ಅರ್ಧ ಭಾಗವಾಗಿ ಮಾಡಿ ಒಟ್ಟು, ಮತದಾರರ ಪಟ್ಟಿಯಲ್ಲಿ ನಗರಸಭೆಯ ವ್ಯಾಪ್ತಿಯಿಂದ 1,544 ಮತದಾರರನ್ನು ಹೊರಗೆ ಇಟ್ಟಿದ್ದಾರೆ. ಇದರಿಂದ ಅಷ್ಟು ಜನರು ಯಾವುದೇ ಚುನಾವಣೆಯಲ್ಲೂ ಮತದಾನ ಮಾಡದಂತಾಗಿದೆ. ಈ ಹಿಂದೆ ಈ ಕುರಿತು ಪ್ರತಿಭಟನೆಗೂ ನಡೆದಿವೆ. ನಂತರ ಹೈ ಕೋರ್ಟ್ ಮೆಟ್ಟಿಲೇರಿದ್ದು, ವಂಚಿತ ಮತದಾರರಿಗೆ ಈ ಹಿಂದಿನಂತೆ ಮತದಾನಕ್ಕೆ ಅವಕಾಶ ನೀಡಲು ಆದೇಶ ನೀಡಿದೆಯಾದರೂ ಸಂಬಂಧಿತ ಅಧಿಕಾರಿಗಳು ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ನಡುವೆ ಮಾತನಾಡಿ ಪರಿಶೀಲನೆ ನಡೆಸಿ, ಹೈ ಕೋರ್ಟ್ ಆದೇಶವನ್ನು ನಿಯಮನುಸಾರ ಜಾರಿ ಮಾಡಲು ಕ್ರಮವಹಿಸುತ್ತೇನೆ. ಟಿ.ಎಸ್.ಶಿವರಾಜ್, ತಹಸೀಲ್ದಾರ್ 20 ವರ್ಷಗಳಿಂದ ಮತದಾನ ಮಾಡುತ್ತಿದ್ದೇವೆ. ಆದರೆ ಏಕಾಏಕಿ ಮತದಾರರ ಪಟ್ಟಿಯಿಂದ ಸುಮಾರು 1,554 ಮತದಾರರನ್ನು ಕೈ ಬಿಟ್ಟಿದ್ದಾರೆ. ಅಂದಿನಿಂದ ಇಂದಿನವರೆಗೂ ನಾವು ನಗರಸಭೆ ಕಂದಾಯ ಪಾವತಿ ಮಾಡುತ್ತಿದ್ದೇವೆ. ಪ್ರಸ್ತುತ ನಮ್ಮನ್ನು ಇಲ್ಲಿ ಕೈ ಬಿಟ್ಟಿದ್ದರೂ ಬೇರೆ ಮತ ಪಟ್ಟಿಯಲ್ಲೂ ನಮ್ಮ ಹೆಸರು ಇಲ್ಲ. ಕೂಡಲೇ ನ್ಯಾಯಾಲಯದ ಆದೇಶದಂತೆ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು. ಕೆ.ಮಲ್ಲೇಶ್, ಕರೇನಹಳ್ಳಿ ನಿವಾಸಿ