ಜಿಲ್ಲೆ

ಸ್ಪರ್ಧೆ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ

ಚಿತ್ರದುರ್ಗ: ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ (ಎನ್‌ಪಿಇಪಿ) ಕಾರ‌್ಯಕ್ರಮದಿಂದ ಆಯೋಜಿಸುವ ಸ್ಪರ್ಧಾ ಚಟುವಟಿಕೆಗಳು ಶೈಕ್ಷಣಿಕ ಕಲಿಕೆಯೊಂದಿಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಶನಿವಾರ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಸ್ಪರ್ಧಾ ಕಾರ‌್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲಾವೃದ್ಧಿಗೆ, ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಿವೆ ಎಂದರು.
ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆಯೋಜಿಸುವ ಪಾತ್ರಾಭಿನಯ, ಜನಪದ ನೃತ್ಯ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತಾಲೂಕು ಹಂತದ ಅನುಷ್ಠಾನಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಎನ್‌ಪಿಇಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ, ತಾಲೂಕು, ಜಿಲ್ಲಾ, ಪ್ರಾದೇಶಿಕ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಪ್ರತಿ ಸ್ಪರ್ಧೆಯೂ ಥೀಮ್ ಆಧಾರಿತವಾಗಿದ್ದು, ಹಿಂದಿ, ಇಂಗ್ಲೀಷ್‌ನಲ್ಲಿ ಪ್ರಸ್ತುತ ಪಡಿಸಬೇಕು. ಜನಪದ ನೃತ್ಯ ಸ್ಪರ್ಧೆಯನ್ನು ಸ್ಥಳೀಯ ಭಾಷೆಯಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ. ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತದ ಸ್ಪರ್ಧೆಗೆ ಅರ್ಹತೆ ಪಡೆಯಲಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಪೂರ್ಣಿಮಾ, ಎಚ್.ಗಿರಿಜಾ, ಉಪನ್ಯಾಸಕರಾದ ಶಿವಲೀಲಾ, ರೇವಣ್ಣ, ಪದ್ಮಾ, ಶಿಕ್ಷಣ ಸಂಯೋಜಕ ಕೆ.ಆರ್.ಲೋಕೇಶ್, ತಾಂತ್ರಿಕ ಸಹಾಯಕ ಲಿಂಗರಾಜು ಇದ್ದರು.