ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕಾದರೆ ಸಮಯದ ಸಂಪೂರ್ಣ ಸದ್ಬಳಕೆ ಅವಶ್ಯಕ ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲುಗಳು ಮತ್ತು ಅವಕಾಶಗಳು’ ವಿಷಯದ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ನಮ್ಮ ಬಳಿ ಸಾಕಷ್ಟು ಸಮಯ ಇದ್ದರೂ ಆ ಸಮಯವನ್ನು ವ್ಯರ್ಥವಾಗಿ ಕಳೆಯುತ್ತೇವೆ. ಈ ರೀತಿ ಸಮಯವನ್ನು ವ್ಯರ್ಥವಾಗಿ ಕಳೆಯುವ ಬದಲು ಓದಿನಲ್ಲಿ ತೊಡಬೇಕು ಎಂದು ಸಲಹೆ ನೀಡಿದರು.
ನಮ್ಮ ನಿತ್ಯಕರ್ಮ, ನಿದ್ರೆ, ಕಾಲೇಜಿನ ಸಮಯವನ್ನು ಕಳೆದರೂ ನಮಗೆ ಪ್ರತಿನಿತ್ಯ 6 ಗಂಟೆ ದೊರೆಯುತ್ತದೆ. ಪ್ರತಿನಿತ್ಯ 6 ಗಂಟೆ ಓದಿಗೆ ಮೀಸಲಿಟ್ಟರೆ ಒಂದು ವರ್ಷಕ್ಕೆ 2,190 ಗಂಟೆ ಓದಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ಇಷ್ಟು ಸಮಯ ಸಾಕು, ಇದಕ್ಕಿಂತ ಹೆಚ್ಚಿನ ಸಮಯದ ಅವಶ್ಯಕತೆ ಇಲ್ಲ. ಯುಪಿಎಸ್‌ಇ ಸಿಲಬಸ್ ಪೂರ್ಣಗೊಳಿಸಲು ಕೇವಲ 800 ಗಂಟೆ ಸಾಕು. ಆದರೆ, ನಿಮ್ಮ ಬಳಿ ಒಂದೇ ವರ್ಷದಲ್ಲಿ 2,190 ಗಂಟೆ ಇದೆ. ಈ ಸಮವಯನ್ನು ಸದುಪಯೋಗಪಡಿಸಿಕೊಂಡರೆ ಯಶಸ್ಸು ನಿಶ್ಚಿತ ಎಂದು ಹೇಳಿದರು.
ನಿಮ್ಮ ಸಾಮರ್ಥ್ಯವನ್ನು ನೀವು ಮೊದಲು ಅರಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು ಹಾಗೂ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರಲ್ಲ. ಬುದ್ಧಿವಂತಿಕೆಯನ್ನು ಅಂಕ ಹಾಗೂ ವಿದ್ಯಾರ್ಹತೆಯಲ್ಲಿ ಅಳೆಯಲು ಸಾಧ್ಯವಿಲ್ಲ. ವಿದ್ಯಾಭ್ಯಾಸದಲ್ಲಿ ಹಿಂದುಳಿದ ಹಲವಾರು ವ್ಯಕ್ತಿಗಳು ದೊಡ್ಡ ಉದ್ಯಮವನ್ನು ಕಟ್ಟಿ ಯಶಸ್ಸು ಗಳಿಸಿರುವ ಉದಾಹರಣೆಗಳು ಇವೆ. ನಾವು ಅವರನ್ನು ದಡ್ಡರು ಎಂದು ಕರೆಯಲು ಸಾಧ್ಯವೇ? ಅವರು ಅವರ ಕ್ಷೇತ್ರದಲ್ಲಿ ಬುದ್ಧಿವಂತರಾಗಿರುತ್ತಾರೆ. ಹಾಗಾಗಿ ನಿಮ್ಮ ಕ್ಷೇತ್ರ ಯಾವುದು ಎಂಬುದುನ್ನು ನೀವು ಕಂಡುಕೊಳ್ಳಿ. ಆಸಕ್ತಿ ಇರುವ ಕ್ಷೇತ್ರದಲ್ಲಿ ಮಾತ್ರ ಮುಂದುವರೆಯಿರಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪಷ್ಟ ಗುರಿ ಇರಬೇಕು. ಗುರಿ ಇಲ್ಲದೆ ಇದ್ದರೆ ಜಯ ದೊರೆಯುವುದಿಲ್ಲ. ಗುರಿಯನ್ನು ತಲುಪಲು ಸ್ಪಷ್ಟವಾದ ದಾರಿ ರೂಪಿಸಿಕೊಳ್ಳಬೇಕು. ಈ ದಾರಿಯಲ್ಲಿ ನಡೆಯಲು ಬೇಕಾಗುವ ಎಲ್ಲ ರೀತಿಯ ಮಾರ್ಗದರ್ಶನವನ್ನು ಮಾಡಲು ಗುರುವಿನ ಅವಶ್ಯಕತೆ ಇದೆ. ಗುರುವಿನ ಸಹಾಯದಿಂದ ಗುರಿ ಮುಟ್ಟು ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗುರಿ ಸಾಧಿಸಲು ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸ ಇರಲಿ. ಯಾವುದೇ ರೀತಿಯ ಅಡೆತಡೆಗಳು ಎದುರಾದರೂ ಗುರಿ ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲ ನಿಮ್ಮಲ್ಲಿ ಇರಲಿ. ಈ ಛಲ ನಿಮ್ಮಲ್ಲಿ ಇದ್ದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ಕಾಲೇಜಿನ ಇತಿಹಾಸ ವಿಭಾಗದ ಡೀನ್ ಡಾ. ಎಚ್. ಶ್ರೀಧರ್ ಮಾತನಾಡಿ, ಇದು ಸ್ಪರ್ಧಾ ಜಗತ್ತಾಗಿದ್ದು, ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಪ್ರಬಲ ಪ್ರತಿಸ್ಪರ್ಧಿಗಳೇ ಆಗಿರುತ್ತಾರೆ. ಹೀಗಾಗಿ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಜ್ಜಾಗಬೇಕು. ನಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕಿ ಡಿ.ಗೀತಾ ಇದ್ದರು.