ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಿ

ವಿರಾಜಪೇಟೆ: ವಿದ್ಯಾರ್ಥಿಗಳು ಕಲಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಒತ್ತು ನೀಡುವಂತೆ ಸಾಹಿತಿ ಅರವಿಂದ ಚೊಕ್ಕಾಡಿ ಸಲಹೆ ನೀಡಿದರು.

ವಿರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ರೀಡಾ, ಸಾಂಸ್ಕೃತಿಕ, ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡ ಭಾಷೆಯ ಬಳಕೆ ಮತ್ತು ಅದರ ಸ್ಥಿತಿಗತಿಯನ್ನು ಉಲ್ಲೇಖಿಸಿದರಲ್ಲದೆ, ಸಾಮಾಜಿಕ ಮಾಧ್ಯಮಗಳು ಬಳಸುವ ಭಾಷೆ ಜನಸಾಮಾನ್ಯರ ಭಾವನೆಗಳ ಮೇಲೆ ಬೀರುವ ಪರಿಣಾಮಗಳು ಹಾಗೂ ಅದರಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತವಾದ ಘಟನೆಗಳನ್ನು ವಿವರಿಸಿದರು.

ದೈಹಿಕ ಶಿಕ್ಷಣ ನಿವೃತ್ತ ಅಧಿಕಾರಿ ಸಿ.ಪಿ.ಪೂಣಚ್ಚ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ವಹಿಸಿದಾಗ ಮಾತ್ರ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಪ್ರಸಕ್ತ ಸಾಲಿನ ಕಾಲೇಜಿನ ಸಾಧನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

2024-25ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ಫಾತಿಮತ್ ರಾಹಿಲಾ ಅವರಿಗೆ ನೀಡಿ ಗೌರವಿಸಲಾಯಿತು. ಇದರೊಂದಿಗೆ ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ವಿತರಣೆ ಹಾಗೂ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿರುವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಎಂ.ಆರ್.ಚರಿತಾ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.