ಮದ್ದೂರು: ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸಿದರೆ, ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆಯ ಆರ್‌ಕೆ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ 53 ಜಾನಪದ ಮತ್ತು ರಂಗಭೂಮಿ ಕಲಾವಿದರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಅಸಾಮಾನ್ಯ ಪ್ರತಿಭೆಗಳಿದ್ದು, ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರೆ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದ್ದು, ಇಂತಹ ಸುಮಧುರ ಭಾಷೆ ಎಂದಿಗೂ ನಶಿಸುವುದಿಲ್ಲ ಎಂದರು.
ಆರ್‌ಕೆ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಮಾತನಾಡಿ, ಕನ್ನಡ ಭಾಷೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡಲು ಯುವ ಜನಾಂಗ ಮತ್ತು ವಿದ್ಯಾರ್ಥಿಗಳು ಮುಂದಾಗಬೇಕು. ಆಗ ಇಡೀ ವಿಶ್ವದಲ್ಲಿ ಕನ್ನಡ ಡಿಂಡಿಮ ಬಾರಿಸಲು ಸಾಧ್ಯವಾಗುತ್ತದೆ ಎಂದರು.
ಸೋಬಾನೆ, ಕೋಲಾಟ, ರಂಗಭೂಮಿ, ಪೂಜಾ ಕುಣಿತ, ಮಂಗಳವಾದ್ಯ, ಭಾಗವತ, ವೀರಗಾಸೆ, ತತ್ವಪದ, ಹರಿಕಥೆ, ಕೀಲು ಕುದುರೆ, ಗಾಯಕಿ, ಮೇಕಪ್‌ಮ್ಯಾನ್ ಸೇರಿದಂತೆ ವಿವಿಧ ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಅಭಿನಂದಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಟ್ರಸ್ಟಿ ಕೆಂಪಯ್ಯ, ಶೈಕ್ಷಣಿಕ ಸಲಹೆಗಾರ ತುಕರಾಮ್, ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ ಇತರರು ಇದ್ದರು.