ಮದ್ದೂರು: ವಿದ್ಯಾರ್ಥಿಗಳು ಶೈಕ್ಷಣಿಕ ಕಲಿಕೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚು ಗಮನಹರಿಸಿದರೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ.ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಜಾನಪದ ಮತ್ತು ರಂಗಭೂಮಿ ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಪುಸ್ತಕಗಳ ಜತೆ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಿದರೆ ಉನ್ನತ ಹುದ್ದೆ ಪಡೆಯಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಅಸಾಮಾನ್ಯ ಪ್ರತಿಭೆಗಳಿದ್ದು, ಅವರನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದರು.
ಆರ್.ಕೆ.ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ರಾಮಕೃಷ್ಣ ಮಾತನಾಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಕಂಸಾಳೆ, ಸಾಮೂಹಿಕ ನೃತ್ಯ ಹಾಗೂ ಸಮೂಹ ಗೀತೆಗಳು ನೋಡುಗರ ಗಮನ ಸೆಳೆದವು. ವಿವಿಧ ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಟ್ರಸ್ಟಿ ಕೆಂಪಯ್ಯ, ಶೈಕ್ಷಣಿಕ ಸಲಹೆಗಾರ ತುಕರಾಮ್, ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ, ನಿವೃತ್ತ ಮುಖ್ಯಶಿಕ್ಷಕ ಶಿವಣ್ಣಗೌಡ ಇದ್ದರು.