ಹಾಸನ: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ಆ.27ರಂದು ನಡೆಯಲಿರುವ ಪೂರ್ವಭಾವಿ ಪರೀಕ್ಷೆಯಲ್ಲಿ ಯಾವುದೇ ಲೋಪ-ದೋಷಗಳಿಲ್ಲದಂತೆ ಎಚ್ಚರವಹಿಸಿ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿಯೂ ಶಾಂತಿಯುತವಾಗಿ ಪರೀಕ್ಷೆ ನಡೆಸಲು ಸರ್ವ ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ಪರೀಕ್ಷೆಯ ಹಿಂದಿನ ದಿನವೇ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಿ. ಪರೀಕ್ಷೆಗಳನ್ನು ನಡೆಸಲು ಆಸನ ವ್ಯವಸ್ಥೆ, ನೋಂದಣಿ ಸಂಖ್ಯೆಗಳನ್ನು ಟೇಬಲ್ ಮೇಲೆ ನಮೂದಿಸುವುದು.(ಪ್ರಶ್ನೆ ಪುಸ್ತಿಕೆಯ ಶ್ರೇಣಿಯನ್ನು ಬರೆಯಬಾರದು), ಪರೀಕ್ಷೆಗೆ ಸಂಬಂಧಿಸಿದ ಆಸನ ನಕ್ಷೆಯನ್ನು ಪ್ರತಿ ಕೊಠಡಿ, ಮಹಡಿ ಹಾಗೂ ಅಭ್ಯರ್ಥಿಗಳು ತೆರಳಬೇಕಾದ ಮಾರ್ಗದ ಮಾಹಿತಿಯನ್ನು ಚಿಹ್ನೆಗಳ ಸಹಿತ ಪರೀಕ್ಷೆಯ ದಿನದಂದು ಆವರಣದಲ್ಲಿನ ಪ್ರಮುಖ ಸ್ಥಳದಲ್ಲಿ ಪ್ರಕಟಿಸುವುದು ಹಾಗೂ ಸೂಚನಾ ಫಲಕಗಳನ್ನು ಮುಖ್ಯದ್ವಾರದಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪರೀಕ್ಷೆಗೆ ಸಂಬಂಧಿಸಿದಂತೆ, ಸೂಚನೆಗಳ ಕುರಿತು ಆಯೋಗದಿಂದ ಒದಗಿಸಲಾಗುವ ಭಿತ್ತಿ ಪತ್ರಗಳನ್ನು ಅಭ್ಯರ್ಥಿಗಳು ಓದಿಕೊಳ್ಳಲು ಅನುಕೂಲವಾಗುವಂತೆ ಸೂಚನಾ ಫಲಕದಲ್ಲಿ ಸೂಕ್ತ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ವಹಿಸಿ, ಪರೀಕ್ಷಾ ಕೊಠಡಿ ವಿಶಾಲವಾಗಿದ್ದಲ್ಲಿ ಪ್ರತಿ 24 ಅಭ್ಯರ್ಥಿಗಳಿಗೆ ಒಂದರಂತೆ ಬ್ಲಾಕ್ ಮಾಡಿ ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು. ಸಂವೀಕ್ಷಕರು ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳ ಪಕ್ಕದಲ್ಲಾಗಲಿ ಅಥವಾ ಗೈರು ಹಾಜರಾದ ಅಭ್ಯರ್ಥಿಗಳ ಸ್ಥಳದಲ್ಲಾಗಲಿ ಕುಳಿತುಕೊಳ್ಳಬಾರದು. ಹಾಗೂ ಸಂವೀಕ್ಷಕರಿಗೆ ಪ್ರತಿ ಕೊಠಡಿಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಸಂವೀಕ್ಷಕರಿಗೆ ಅವರ ಕರ್ತವ್ಯಗಳ ಬಗ್ಗೆ ನೀಡಲಾದ ಸೂಚನೆಗಳ ಪ್ರತಿಯನ್ನು ನೀಡಿ ಅದನ್ನು ಚಾಚೂ ತಪ್ಪದೆ ಓದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು ಎಂದರು.
ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗಳಿಗೆ ತೆರಳಲು ಅನುಕೂಲಕರವಾಗುವಂತೆ ವೀಲ್ ಚೇರ್/ಇಳಿಜಾರು (ರ‌್ಯಾಂಪ್) ಸೌಲಭ್ಯ ಒದಗಿಸತಕ್ಕದ್ದು ಹಾಗೂ ಶೌಚಾಲಯ ವ್ಯವಸ್ಥೆ ಇರತಕ್ಕದ್ದು. ಪರೀಕ್ಷೆ ಹಿಂದಿನ ದಿನ ಸಿಸಿ ಟಿವಿ, ಕ್ಯಾಮರಾ, ಬಾಡಿ ಕ್ಯಾಮರಾ, ಫೇಸ್ ರೆಕಗ್ನೈಸೆಷನ್, ಜಾಮರ್‌ಗಳನ್ನು ಉಪ ಪರೀಕ್ಷಾ ಕೇಂದ್ರದ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸುವುದು ಮತ್ತು ಸದರಿ ದಿನದಂದೇ ಅವುಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ವೀಕ್ಷಕರು ಸರ್ಟಿಫಿಕೆಟ್ 1 ಹಾಗೂ 2ನಲ್ಲಿ ದೃಢೀಕರಣವನ್ನು ಪಡೆಯುವ ಸಂಬಂಧ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷಾ ಕಾರ್ಯಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಹಾಗೂ ಆಯೋಗದಿಂದ ನಿಯೋಜಿತರಾಗುವ ಅಧಿಕಾರಿ, ಸಿಬ್ಬಂದಿ ಜತೆ ಸಮನ್ವಯತೆ ಸಾಧಿಸಿ ಪರೀಕ್ಷಾ ದಿನಗಳಂದು ಪರೀಕ್ಷಾ ಕಾರ್ಯಗಳ ಸುಲಲಿತ ನಿರ್ವಹಣೆಗೆ ಸಹಕರಿಸುವಂತೆ ಸೂಚಿಸಿದರು.
ಪರೀಕ್ಷಾ ದಿನದಂದು ಉಪಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತು ಸರಿಯಾಗಿದೆಯೇ ಎಂಬುದನ್ನು ವೀಕ್ಷಕರು ಪರಿಶೀಲಿಸಬೇಕು. ಏನಾದರೂ ನ್ಯೂನತೆ ಇದ್ದಲ್ಲಿ ವರದಿ ಮಾಡಬೇಕು. ಪರೀಕ್ಷಾ ಕೇಂದ್ರದವರು ಎಲ್ಲ ಸಿದ್ಧತೆಗಳನ್ನು ಕ್ರಮವಾಗಿ ಮಾಡಿದ್ದಾರೆಯೇ ಹಾಗೂ ಸಂವೀಕ್ಷಕರಿಗೆ ಸಭೆ ನಡೆಸಿ ತರಬೇತಿ ನೀಡಲಾಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು ಪರೀಕ್ಷಾ ಕ್ರಮದ ಬಗ್ಗೆ ಅವರಲ್ಲಿ ಸಂದೇಹವಿದ್ದಲ್ಲಿ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಅಪರ ಜಿಲ್ಲಾಧಿಕಾರಿಗೆ ವರದಿ ಮಾಡಬೇಕು ಎಂದು ತಿಳಿಸಿದರು.
ಪ್ರವೇಶ ಪತ್ರ ಹಾಗೂ ಮೂಲ ಗುರುತಿನ ಚೀಟಿ ಹಾಜರುಪಡಿಸದ ಅಭ್ಯರ್ಥಿಗಳಿಗೆ ಪರೀಕ್ಷಾ ಉಪ ಕೇಂದ್ರದಲ್ಲಿ ಪ್ರವೇಶಿಸಲು ಅನುಮತಿ ನೀಡಬಾರದು. ಒಎಂಆರ್ ಉತ್ತರ ಹಾಳೆ, ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳನ್ನು ತೆರೆಯುವಾಗ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳ ಮೊಹರು ಕ್ರಮಬದ್ಧವಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ದೃಢೀಕರಣ ಪತ್ರವನ್ನು ನೀಡುವಂತೆ ತಿಳಿಸಿದರು.
ಪರೀಕ್ಷಾ ಉಪ ಕೇಂದ್ರದೊಳಗೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ, ಅಭ್ಯರ್ಥಿಗಳಿಗೆ ಮೊಬೈಲ್ ಫೋನ್, ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿತರಿಗೆ ಸೂಚಿಸತಕ್ಕದ್ದು. ಪರೀಕ್ಷೆ ಪ್ರಾರಂಭವಾಗುವ ಮುನ್ನ ಒಎಂಆರ್ ಉತ್ತರ ಹಾಳೆಗಳನ್ನು ಕೊಠಡಿವಾರು ಸರಿಯಾಗಿ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಹೇಳಿದರು.
ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಉತ್ತರ ಹಾಳೆಗಳ ಪ್ಯಾಕಿಂಗ್ ಮಾಡುವ ಕಾರ್ಯವನ್ನು ಯಾವುದಾದರೊಂದು ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಕಡ್ಡಾಯವಾಗಿ ವೀಕ್ಷಿಸತಕ್ಕದ್ದು ಮತ್ತು ಸೀಲ್ಡ್ ಮಾಡಿದ ಬಂಡಲ್‌ಗಳನ್ನು ಇನ್‌ಶ್ಯೂರ್ಡ್ ಸ್ಪೀಡ್ ಪೋಸ್ಟ್ ಮಾಡಲಾಗಿದೆಯೇ ಹಾಗೂ ಮೇಲ್ವಿಚಾರಕರು ಪರಿಶೀಲನಾ ಸಂಖ್ಯೆಯನ್ನು ಭರ್ತಿ ಮಾಡಿ ಆಯೋಗಕ್ಕೆ ಪ್ರತ್ಯೇಕವಾಗಿ ರವಾನಿಸಿರುತ್ತಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಪರೀಕ್ಷೆ ಮುಗಿದ ನಂತರ ಪರೀಕ್ಷೆ ನಡೆದ ರೀತಿಯ ಬಗ್ಗೆ ವರದಿ ಮಂಡಿಸಿ ಮುಂದಿನ ಪರೀಕ್ಷೆಗಳು ಉತ್ತಮವಾಗಿ ನಡೆಯಲು ಆಯೋಗಕ್ಕೆ ಸೂಕ್ತ ಸಲಹೆಗಳನ್ನು ನೀಡಲು ವೀಕ್ಷಕರಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಖಜಾನೆ ಉಪ ನಿರ್ದೇಶಕರಾದ ಕವಿತಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಲಿಂಗಯ್ಯ ಹಾಗೂ ಪರೀಕ್ಷಾ ಮೇಲ್ವಿಚಾರಕರು, ವೀಕ್ಷಕರು ಹಾಜರಿದ್ದರು.