ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವ ಮುಖಂಡರ ಕುರಿತು ಕೆಪಿಸಿಸಿ ಚುನಾವಣಾ ವೀಕ್ಷಕರು ನಗರದಲ್ಲಿ ಬುಧವಾರ ಅಭಿಪ್ರಾಯ ಸಂಗ್ರಹಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ರಮಾನಾಥ್ ರೈ ನೇತೃತ್ವದ ತಂಡ, ಬ್ಲಾಕ್, ಬೂತ್ ಅಧ್ಯಕ್ಷರು, ಅಭ್ಯರ್ಥಿಗಳಿಂದ ಮಾಹಿತಿ ಸಂಗ್ರಹಿಸಿದರು. ಕೆಪಿಸಿಸಿ ಅಧ್ಯಕ್ಷ ಧ್ರುವನಾರಾಯಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇತರರು ಇದ್ದರು.
ಈ ವೇಳೆ ನರಸಿಂಹರಾಜ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ ಸಮ್ಮತ ವ್ಯಕ್ತವಾದರೆ, ಕೃಷ್ಣರಾಜ ಹಾಗೂ ಚಾಮರಾಜದಲ್ಲಿ ಪೈಪೋಟಿ ಹೆಚ್ಚಾಗಿದ್ದರಿಂದ ನಮಗೇ ಟಿಕೆಟ್ ಬೇಕು ಎನ್ನುವ ಪ್ರಬಲ ಒತ್ತಾಯ, ಕಾರ್ಯಕರ್ತರ ಮೂಲಕ ಒತ್ತಡ ಹಾಕುವ ತಂತ್ರಗಳು ನಡೆದವು.
ಕೆಪಿಸಿಸಿಗೆ ಈಗಾಗಲೇ ಲಕ್ಷ ರೂ. ಠೇವಣಿ ನೀಡುವ ಮೂಲಕ ‘ಬಿ’ ಫಾರ್ಮ್‌ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಆಗಮಿಸಿರುವ ರಮಾನಾಥ್ ರೈ ನೇತೃತ್ವದ ತಂಡ, ನಗರದಲ್ಲಿ ಮೂರು ದಿನಗಳಿಂದ ವಿವಿಧ ಕ್ಷೇತ್ರದ ಮುಖಂಡರಿಂದ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಆಯಾ ಕ್ಷೇತ್ರದ ಬ್ಲಾಕ್ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿ ಬೂತ್ ಅಧ್ಯಕ್ಷರ ಅಭಿಪ್ರಾಯವನ್ನು ಕೇಳಲಾಯಿತು. ಈ ವೇಳೆ ಆಯಾ ಕ್ಷೇತ್ರದ ಆಕಾಂಕ್ಷಿಗಳು ಸಹ ಸ್ಪರ್ಧೆಗೆ ಬೆಂಬಲಿಗರ ಮೂಲಕ ಒಲವು ತೋರಿದರು. ನರಸಿಂಹರಾಜ ಕ್ಷೇತ್ರದಲ್ಲಿ ಮಾಜಿ ಮೇಯರ್ ಅಯೂಬ್‌ಖಾನ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರೂ ಬಹುತೇಕರು ಹಾಲಿ ಶಾಸಕ ತನ್ವೀರ್‌ಸೇಠ್ ಪರ ಒಲವು ತೋರಿದರು ಎನ್ನಲಾಗಿದೆ.
ಹಣಾಹಣಿ ಕ್ಷೇತ್ರಗಳು:
ಚಾಮರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ವಾಸು ಹಾಗೂ ಮುಖಂಡ ಕೆ.ಹರೀಶ್‌ಗೌಡ ನಡುವೆ ಟಿಕೆಟ್ ತಮಗೆ ಬೇಕು ಎನ್ನುವ ಪ್ರಬಲ ಒತ್ತಾಯ ಕೇಳಿಬಂತು.
ಜತೆಗೆ ಕೃಷ್ಣರಾಜ ಕ್ಷೇತ್ರದಲ್ಲಿಯೂ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ಕುಮಾರ್ ಅವರು ತಮ್ಮ ಬೆಂಬಲಿಗರ ಮೂಲಕ ವೀಕ್ಷಕರ ಮುಂದೆ ತಮ್ಮ ಪರ ಒಲವು, ಬಲ ಪ್ರದರ್ಶಿಸಿದರು. ನವೀನ್‌ಕುಮಾರ್ ಅವರ ಪರವೂ ಅಭಿಪ್ರಾಯ ವ್ಯಕ್ತವಾಗಿ ಎಲ್ಲವನ್ನೂ ಕೆಪಿಸಿಸಿಗೆ ತಿಳಿಸುವ ನಿರ್ಣಯ ಕೈಗೊಳ್ಳಲಾಗಿದೆ.