ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸ್ಪರ್ಧಾ ಅರಿವು ಸಂಸ್ಥೆಯು ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸ್ಪರ್ಧಾ ಸಾರಥಿ’ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ.
ಕಾರ್ಯಾಗಾರವನ್ನು ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಏನೆಲ್ಲ ಪ್ರಯತ್ನ ಮಾಡಬೇಕು ಹಾಗೂ ಸೇವೆಗೆ ಸೇರಿದ ಬಳಿಕ ಕಾರ್ಯ ನಿರ್ವಹಿಸುವ ಬಗೆಯನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕ ಭೈರಪ್ಪ (ಐಆರ್‌ಎಸ್) ಮಾತನಾಡಿ, ನಾವು ಸಾಧಿಸುವ ಗುರಿ ಬಗ್ಗೆ ಸದಾ ಅರಿವಿರಬೇಕು. ಸತತ ಪ್ರಯತ್ನದಿಂದ ಯಶಸ್ಸು ಸಿಗುವುದು ನಿಶ್ಚಿತ ಎಂದ ಅವರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು 5 ವರ್ಷದ ಪ್ರಶ್ನೆ ಪತ್ರಿಕೆ ಗಮನಿಸುವುದು ತಯಾರಿಯ ಮೊದಲ ಹಂತ. ನಂತರ ಓದಿದ್ದನ್ನು ಮನನ ಮಾಡುವುದು, ಪ್ರಮುಖ ಘಟನಾವಳಿಗಳನ್ನು ಸುಲಭ ಮಾದರಿಯಲ್ಲಿ ನೆನಪಿಟ್ಟುಕೊಳ್ಳುವುದು ಸೇರಿ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಬೇಕಿರುವ ವಿವಿಧ ಸೂತ್ರಗಳನ್ನು ತಿಳಿಸಿದರು.
ಕೆಎಎಸ್ ಅಧಿಕಾರಿ ಹರೀಶ ಜಿ.ಕೆ. ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎಚ್. ಪಾಟೀಲ, ಅಶೋಕ ಮಿರ್ಜಿ, ಗರಣಿ ಕೃಷ್ಣಮೂರ್ತಿ, ಎಸ್.ಪಿ. ಪಾಟೀಲ ಅವರು ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮಹತ್ವ, ಸ್ಪರ್ಧಾತ್ಮಕ ಪರೀಕ್ಷೆಗಳ ತಂತ್ರಗಳು ಹಾಗೂ ಯಶಸ್ಸಿನ ಸೂತ್ರಗಳು ಸೇರಿ ಇತರ ವಿಷಯಗಳ ಕುರಿತು ಮಾಹಿತಿ ನೀಡಿದರು.
ನಂತರ ನಡೆದ ಸಂವಾದದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪರೀಕ್ಷೆ ಸಿದ್ಧತೆಯಲ್ಲಿ ಎದುರಾದ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಕಂಡುಕೊಂಡರು. ಸ್ಪರ್ಧಾ ಅರಿವು ಸಿಇಒ ರಾಜಶೇಖರ ಬಿಸನಳ್ಳಿ ಅಧ್ಯಕ್ಷತೆ ವಹಿಸಿದ್ದರು.
ವಿಜಯವಾಣಿ ಜಾಹೀರಾತು ವಿಭಾಗದ ಉಪ ವ್ಯವಸ್ಥಾಪಕ ಶಿವಕುಮಾರ ಕೆರೂರ, ಸ್ಪರ್ಧಾ ಅರಿವು ಸಿಬ್ಬಂದಿ, ಧಾರವಾಡ, ಬೆಳಗಾವಿ, ದಾವಣಗೆರೆ, ಕಲಬುರ್ಗಿ, ಗದಗ, ಹಾವೇರಿ, ಕಾರವಾರ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳಿಂದ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸುಕೃತಾ ಪಾಟೀಲ ಸ್ವಾಗತಿಸಿದರು. ಮೇಘಾ ಪಾಟೀಲ ನಿರೂಪಿಸಿದರು. ಮಲ್ಲಿಕಾ ಕೆಂಗಲ ವಂದಿಸಿದರು.