ಹಾಸನ: ಸ್ನೇಹಿತರಿಂದಲೇ ಅಪಹರಣಕ್ಕೊಳಗಾಗಿದ್ದ ನಗರದ ಹೊಯ್ಸಳನಗರ ಬಡಾವಣೆ ನಿವಾಸಿ ಆರ್.ಪಿ. ಲಿಖಿತ್ (26) ಎಂಬಾತನ ಶವ ಬುಧವಾರ ತಾಲೂಕು ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯ ಯೋಗಿಹಳ್ಳಿ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿದೆ.
ಕಳೆದ ಫೆ.5 ರಂದು ಸಂಜೆ ಲಿಖಿತ್‌ನನ್ನು ಆತನ ಸ್ಹೇಹಿತರಾದ ಸಾಗರ್ ಮತ್ತು ನವೀನ್ ಎಂಬಿಬ್ಬರು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಈ ಸಂಬಂಧ ನಗರದ ಕೆ.ಆರ್. ಪುರಂ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರದ ಗವೇನಹಳ್ಳಿ ಬಳಿ ಕಾರುಗಳ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ನಿಂದ ಆತನ ಸ್ನೇಹಿತ ನವೀನ್ ಎಂಬಾತ ಬಹಳ ಹಿಂದೆಯೇ 2.5 ಲಕ್ಷ ರೂ. ಸಾಲ ಪಡೆದಿದ್ದನು. ಎಷ್ಟು ಬಾರಿ ಸಾಲ ವಾಪಸ್ ಕೇಳಿದರೂ ಹಿಂದಿರುಗಿಸದಿದ್ದಾಗ ಬೇಸರಗೊಂಡ ಲಿಖಿತ್, ಸಾಲಕ್ಕೆ ಆಧಾರವಾಗಿ ನವೀನನಿಂದ ಪಡೆದುಕೊಂಡಿದ್ದ ಖಾಲಿ ಚೆಕ್‌ಗೆ 10 ಲಕ್ಷ ರೂ. ನಮೂದಿಸಿ ಬ್ಯಾಂಕ್‌ಗೆ ಹಾಜರುಪಡಿಸಿದ್ದನು. ಚೆಕ್ ಕ್ಯಾಷ್ ಆಗದೇ ಹಿಂದಿರುಗಿ ಬಂದಿತ್ತು. ಆ ಚೆಕ್ ಮುಂದಿಟ್ಟುಕೊಂಡು ನವೀನ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು ಎನ್ನಲಾಗಿದೆ.
ಇದರಿಂದ ಸಿಟ್ಟಿಗೆದ್ದ ನವೀನ ತನ್ನ ಸ್ನೇಹಿತ ಸಾಗರ್‌ನೊಂದಿಗೆ ಸೇರಿ ಕಳೆದ ಫೆ.5 ರಂದು ಸಂಜೆ ಲಿಖಿತ್ ಮನೆಗೆ ಬಂದು ‘ನಿನ್ನ ಬಳಿ ಮಾತನಡುವುದಿದೆ ಬಾ’ ಎಂಬುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋದರು. ಅದಾದ ಕೆಲವೇ ನಿಮಿಷಗಳಲ್ಲಿ ಲಿಖಿತ್ ಸೇರಿದಂತೆ ಎಲ್ಲರ ಮೊಬೈಲ್‌ಗಳು ಸ್ವಿಚ್ ಆಫ್ ಆಗಿದ್ದವು. ತನ್ನ ಪತಿಯನ್ನು ಅಪಹರಿಸಲಾಗಿದ್ದು, ಹುಡುಕಿಕೊಡಬೇಕೆಂದು ಲಿಖಿತ್ ಪತ್ನಿ ಸುಪ್ರೀತಾ ಬಡಾವಣೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಲಿಖತ್‌ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಆತ ಯೋಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಶವವಾಗಿ ಪತ್ತೆ ಆಗಿದ್ದಾನೆ. ದುದ್ದ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಕೊಲೆಗಾರರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮತ್ತು ಡಿವೈಎಸ್ಪಿ ಉದಯಭಾಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.