ಹಾಸನ: ಹಣಕಾಸು ವಿಚಾರವಾಗಿ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ತಿಳಿಸಿದರು.
ಇಲಾಹಿ ನಗರದ ನಿವಾಸಿ ಕಲಿಂ ಪಾಷ (40) ಮಾರಣಾಂತಿಕ ಹಲ್ಲೆಗೆ ಒಳಗಾದವರು. ಹಲ್ಲೆ ಮಾಡಿದ ಮೆಹಬೂಬ್ ನಗರದ ನಿವಾಸಿಗಳಾದ ಫಾರೂಕ್ ಪಾಷ (37) ಮತ್ತು ಆಯೂಬ್ (38)ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರಿನ ಬಿಎಂಟಿಸಿಯಲ್ಲಿ ನೌಕರನಾಗಿರುವ ಕಲಿಂ ಪಾಷ ಬಕ್ರೀದ್ ಹಬ್ಬಕ್ಕೆಂದು ಹಾಸನಕ್ಕೆ ಬಂದಿದ್ದರು. ಜು.1ರ ರಂದು ರಾತ್ರಿ 12ರ ಸಮಯದಲ್ಲಿ ಬೆಂಗಳೂರಿಗೆ ವಾಪಸ್ಸಾಗಲು ಪೆನ್ಷನ್ ಮೊಹಲ್ಲಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಲಿಂ ಮೇಲೆ ಏಕಾಏಕಿ ದಾಳಿ ಮಾಡಿದ ಫಾರೂಕ್ ಹಾಗೂ ಆಯೂಬ್ ಚೆನ್ನಾಗಿ ಥಳಿಸಿದ್ದಾರೆ. ನಂತರ ಕಲೀಂ ತಲೆ ಹಾಗೂ ದೇಹದ ಇತರೆ ಭಾಗಗಳ ಮೇಲೆ ಕಲ್ಲಿನಿಂದ ಜಜ್ಜಿದ್ದಾರೆ. ಬಳಿಕ ಕಲಿಂ ಜೇಬಿನಲ್ಲಿದ್ದ ಮೊಬೈಲ್, ಪರ್ಸ್, 5 ಸಾವಿರ ನಗದನ್ನು ಕಸಿದು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಲೀಂನನ್ನು ಆಸ್ಪತ್ರೆಗೆ ದಾಖಲಿಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಘಟನೆ ಸಂಬಂಧ ಕಲಿಂ ಹೇಳಿಕೆ ಆಧರಿಸಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಹಲ್ಲೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.