ಜಿಲ್ಲೆ

ಸ್ನೇಹಮಯಿ ಕೃಷ್ಣ ಆರೋಪ ಹಸಿಸುಳ್ಳು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು: ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಹಿಂದೆ ಯಾರಿದ್ದಾರೆ? ಯಾರೆಲ್ಲ ಬೆಂಬಲ ನೀಡುತ್ತಿದ್ದಾರೆ ಎಂಬುದೆಲ್ಲ ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹರಿಹಾಯ್ದರು.

ಇಬ್ಬರು ವ್ಯಕ್ತಿಗಳು ಆಮಿಷ ಒಡ್ಡಲು ಬಂದಿದ್ದರು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಸಿಬಿಐಗೆ ವಹಿಸುವಂತೆ ಒಂದು ಹಸಿ ಸುಳ್ಳಿನ ಪತ್ರ ಕೊಟ್ಟಿದ್ದಾರೆ.

ಆದರೆ, ಸಿದ್ದರಾಮಯ್ಯ ಅವರ ಪತ್ನಿ ಯಾವುದೇ ಕಾರಣಕ್ಕೂ ಅಂತಹ ಮಟ್ಟಕ್ಕೆ ಇಳಿಯುವವರಲ್ಲ ಎಂದು  ಸುದ್ದಿಗೋಷ್ಠಿಯಲ್ಲಿ ತಿರುಗೇಟುಕೊಟ್ಟರು.

ಸ್ನೇಹಮಯಿ ಕೃಷ್ಣ ಯಾರ ಆಮಿಷ ಒಳಗಾಗಿಲ್ಲವೇ? ನಿಮ್ಮ ನ್ಯಾಯಾಲಯದ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತದೆ? ಬೆಂಗಳೂರಲ್ಲಿ ನಿಮಗೆ ಪ್ರತ್ಯೇಕ ರೂಮ್ ಕೊಟ್ಟಿದ್ದು ಯಾರು? ದೊಡ್ಡ ಹೋಟೆಲ್‌ನಲ್ಲಿ ಉಳಿಯಲು ವ್ಯವಸ್ಥೆ ಮಾಡಿರುವುದು ಗೊತ್ತಿದೆ. ದೆಹಲಿ ಭೇಟಿ ಬಗ್ಗೆಯೂ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಆಮಿಷಕ್ಕೆ ಒಳಗಾಗದಿದ್ದರೆ ಸ್ನೇಹಮಯಿ ಕೃಷ್ಣ ಪುತ್ರ ಏಕೆ ಹರ್ಷ ಮತ್ತು ಶ್ರೀನಿಧಿ ಜತೆಗೆ ಹೋದರು. ಅವರು ಕೊಟ್ಟಿರುವುದು ಬೆಳಗ್ಗೆ 10.30ರ ದೃಶ್ಯಾವಳಿ ಮಾತ್ರ. ಇಡೀ ದಿನದ ಫುಟೇಜ್ ಕೊಡಬೇಕು. ನಮ್ಮ ಬಳಿಯೂ ಇರುವ ವಿಡಿಯೋವನ್ನು ಪೊಲೀಸರಿಗೆ ನೀಡುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವಮಾನದ ಹೇಳಿಕೆ ಮತ್ತು ಅದನ್ನು ಸಮರ್ಥಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಖಂಡನೀಯ. ಅಂಬೇಡ್ಕರ್ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಇಲ್ಲ ಅಂದಿದ್ರೆ ಅಮಿತ್ ಷಾ ಗುಜರಿ ವ್ಯಾಪಾರ ಮಾಡುತ್ತಿದ್ದರು. ಮೋದಿ ಎಲ್ಲೋ ಟೀ ಮಾಡಿಕೊಂಡಿರುತ್ತಿದ್ದರು ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸತ್ಯವಾಗಿದೆ ಎಂದರು.

ಸಂವಿಧಾನ ಶಿಲ್ಪಿ ಅವಮಾನಿಸುವ ಹೇಳಿಕೆಯೂ ಬಿಜೆಪಿ ಅವರ ಮನಸ್ಥಿತಿ ಏನು ಎಂಬುದನ್ನು ತಿಳಿಯುತ್ತದೆ. 400 ಸೀಟ್ ಬಂದರೆ ಸಂವಿಧಾನವನ್ನೇ ಬದಲಾವಣೆ ತರುತ್ತೇವೆ ಎನ್ನುತ್ತಾರೆ. ಆದರೆ, ಅಂಬೇಡ್ಕರ್ ಅವರು ನಮ್ಮ ಪ್ಯಾಷನ್, ಅಂಬೇಡ್ಕರ್ ಅವರು ನಮ್ಮ ಮೋಟಿವೇಷನ್ ಎಂದರು.

ಸದನದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅವರ ಅವಹೇಳನಕಾರಿ ಹೇಳಿಕೆಯನ್ನು ಲಕ್ಷ್ಮಣ್ ಖಂಡಿಸಿದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಉತ್ತರ ಕೊಡಬೇಕು. ರಾಜ್ಯದ ಜನ ಇವರ ಮನಸ್ಥಿತಿ ಏನು ಎಂದು ತಿಳಿಯಬೇಕು. ಸಿ.ಟಿ. ರವಿ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಕಿ ಒದ್ದು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಮುಡಾವನ್ನು ಬಿಡಿಎ ಮಾದರಿಯಲ್ಲಿ ಮಾಡಲು ವಿಧೇಯಕ ಮಂಡನೆ ಸ್ವಾಗತಾರ್ಹವಾಗಿದೆ. ಮುಡಾಗೆ ಹೊಸ ಸ್ವರೂಪ ನೀಡುವ ಅಗತ್ಯವಿದೆ ಎಂ.ಲಕ್ಷ್ಮಣ್ ಹೇಳಿದರು.