ವಿಜಯಪುರ:ಕರೊನಾ ಹಿನ್ನೆಲೆ ಸ್ನಾತಕ ಹಾಗೂ ಸ್ನಾತಕೋತ್ತರ ಶೈಕ್ಷಣಿಕ ವೇಳಾ ಪಟ್ಟಿಗೆ ಸಾಕಷ್ಟು ಹೊಡೆತ ಬಿದ್ದಿದ್ದು, ಮುಂದೂಡಲ್ಪಟ್ಟ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂಬುದು ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ. ರಾಜ್ಯಾದ್ಯಂತ ಶೇ. 91 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ರದ್ದು ಮಾಡಲು ಆಗ್ರಹಿಸಿದ್ದಾರೆ.
ಎಐಡಿಎಸ್‌ಒ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ವತಿಯಿಂದ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಇಂಥದ್ದೊಂದು ಆಗ್ರಹ ಕೇಳಿ ಬಂದಿದೆ. ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾದ 38,659 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೂಗಲ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆ ಮುಂದುವರಿದಿದೆ. ಈಗಾಗಲೇ ಪೂರ್ಣಗೊಂಡ ಸಮೀಕ್ಷೆಯಲ್ಲಿ ಶೇ. 91 ರಷ್ಟು ವಿದ್ಯಾರ್ಥಿಗಳು ಮುಂದೂಡಲ್ಪಟ್ಟ ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆಂದು ಸಂಘಟನೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಭಾಷ ಜಯಪ್ಪ ಸೋಮವಾರ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊರನಾ ಸಂಕಷ್ಟದ ಸಮಯದಲ್ಲಿ ಪರೀಕ್ಷೆ ಬೇಕೆ? ಎಂಬ ಪ್ರಶ್ನೆಗೆ ಶೇ. 91 ರಷ್ಟು ವಿದ್ಯಾರ್ಥಿಗಳು ಬೇಡ ಎಂದಿದ್ದಾರೆ. ಆನ್‌ಲೈನ್ ಪರೀಕ್ಷೆ ಎದುರಿಸಲು ಸಿದ್ದರಿದ್ದೀರಾ? ಎಂಬ ಪ್ರಶ್ನೆಗೆ ಶೇ.64ರಷ್ಟು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ ಎಂದವರು ತಿಳಿಸಿದರು.
ಈಗಾಗಲೇ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಮುಂದಿನ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತಿದೆ. ಕೆಲವೆಡೆ ಆಂತರಿಕ ಪರೀಕ್ಷೆಗೂ ಮುಂದಾಗಿದ್ದಾರೆ. ಆದರೆ, ಈ ಹಿಂದಿನ ಪರೀಕ್ಷೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಒತ್ತಡ ಹೆಚ್ಚಿಸಿದೆ. ಪ್ರಸ್ತುತ ಸೆಮಿಸ್ಟರ್ ತರಗತಿ ನಡೆಯುತ್ತಿರುವಾಗ ಹಿಂದಿನ ಸೆಮಿಸ್ಟರ್ ಪರೀಕ್ಷೆ ಬರೆಯಿರಿ ಎಂಬುದು ಅವೈಜ್ಞಾನಿಕ ಮತ್ತು ಅತಾರ್ಕಿಕ ಎಂದರು.
ಸದ್ಯ ಆನ್‌ಲೈನ್ ತರಗತಿ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ರಾಜ್ಯ ಬಹುತೇಕ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಕಳೆದ ಸೆಮಿಸ್ಟರ್‌ನಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಪಾಠಗಳು ಸಹ ಸರಿಯಾಗಿ ನಡೆದಿಲ್ಲ. ಇದೀಗ ತಿಂಗಳಾನುಗಟ್ಟಲೆ ಪರೀಕ್ಷೆ ಮುಂದೂಡಿ, ಮುಂದಿನ ಸೆಮಿಸ್ಟರ್‌ಗೆ ಆನ್‌ಲೈನ್ ತರಗತಿ ನಡೆಸಿ ಹಿಂದಿನ ಸೆಮಿಸ್ಟರ್‌ಗೆ ಪರೀಕ್ಷೆಯೂ ನಡೆಸುವುದು ಅತ್ಯಂತ ಅವೈಜ್ಞಾನಿ ಎಂದವರು ಬಣ್ಣಿಸಿದರು.
ಈ ಕಾರಣಗಳಿಗೆ ರಾಜ್ಯದಲ್ಲಿ ಈ ಬಾರಿ ಹಿಂದಿನ (ಬೆಸ ಸಂಖ್ಯೆಯ) ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಎಂಬ ಒಕ್ಕೋರಲಿನ ಬೇಡಿಕೆ ಬರುತ್ತಿದೆ. ಹೀಗಾಗಿ ಜೂ.23 ರಂದು ಅಖಿಲ ಕರ್ನಾಟಕ ಪ್ರತಿಭಟನಾ ದಿನಕ್ಕೆ ಎಐಡಿಸ್‌ಒ ರಾಜ್ಯ ಸಮಿತಿ ಕರೆ ನೀಡಿದೆ ಎಂದರು.
ಖಜಾಂಚಿ ಅಬ್ಬಯ್ಯ ದಿವಾಕರ, ಉಪಾಧ್ಯಕ್ಷ ಹಣಮಂತು, ಜಿಲ್ಲಾ ಸಂಘಟಕರಾದ ಸುರೇಖಾ ರಜಪೂತ, ಸುರೇಖಾ ಕಡಪಟ್ಟಿ ಮತ್ತಿತರರಿದ್ದರು.