ಗೌರಿಬಿದನೂರು: ಆರ್ಥಿಕ ಸ್ಥಿತಿವಂತರು ತಮ್ಮ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೆರವು ಒದಗಿಸುವ ಮೂಲಕ ಬಡವರ ಕೈಹಿಡಿಯಬೇಕು ಎಂದು ತಾಲೂಕಿನ ಅಲಕಾಪುರ ಏಶಿಯನ್ ಫ್ಯಾಬ್ಟೆಕ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ತಾಲೂಕಿನ ಡಿ.ಪಾಳ್ಯ ಹೋಬಳಿ ವೆಂಕಟಾಪುರದ ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ 20 ಸಾವಿರ ರೂ. ಆರ್ಥಿಕ ನೆರವು ನೀಡಿ ಮಾತನಾಡಿ, ಬಾಲಕನಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಭರವಸೆ ನೀಡಿದ ಅವರು, ಗ್ರಾಮದ ದೇವಾಲಯದ ಜೀರ್ಣೋದ್ಧಾರಕ್ಕೆ ಅಗತ್ಯ ನೆರವು ಒದಗಿಸಲಾಗುವುದು. ದೇವಾಲಯದಲ್ಲಿ ಪ್ರತಿ ದಿನ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಮುಖಂಡ ಪಿ.ವಿ.ವಿಜಯಭಾಸ್ಕರ್ ಮಾತನಾಡಿ, ಪುಟ್ಟಸ್ವಾಮಿ ಗೌಡರು ಎರಡು ವರ್ಷಗಳಿಂದ ತಾಲೂಕಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದಾರೆ. ಅವರ ಕೈ ಬಲಪಡಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ತಿಳಿಸಿದರು.ಗ್ರಾಪಂ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿದರು.ಗ್ರಾಮಸ್ಥರ ಕೋರಿಕೆ ಮೇರೆಗೆ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ 1,50,000 ರೂ. ಹಾಗೂ ಕಾಲನಿಯ ದೊಡ್ಡ ಗಂಗಮ್ಮ ದೇವಸ್ಥಾನಕ್ಕೆ 50,000 ರೂ. ಸಹಾಯ ಧನವನ್ನು ಕೆ.ಎಚ್.ಪುಟ್ಟಸ್ವಾಮಿ ಗೌಡ ನೀಡಿದರು. ನಗರಸಭೆ ಮಾಜಿ ಸದಸ್ಯ ಕೆ.ಎಸ್.ಅನಂತರಾಜು, ಮುಖಂಡರಾದ ಅಬ್ದುಲ್ಲಾ, ನಾಗಸಂದ್ರ ಶ್ರೀನಾಥ್, ಅವುಲರೆಡ್ಡಿ, ರಾಮಕೃಷ್ಣಪ್ಪ, ಆಚಾರಿ, ಗಂಗಾದರಪ್ಪ ಇತರರಿದ್ದರು.