ಜಿಲ್ಲೆ

ಸ್ಥಾನ ಭದ್ರತೆಗೆ ಆಕಾಂಕ್ಷಿಗಳ ಕಸರತ್ತು

ಚಿಕ್ಕಬಳ್ಳಾಪುರ : ನಗರ, ಪಟ್ಟಣ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ರಾಜ್ಯ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ ರದ್ದುಪಡಿಸಿರುವುದರ ನಡುವೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಜನಪ್ರತಿನಿಧಿಗಳು, ಕಾನೂನಿನ ಮೂಲಕ ಸ್ಥಾನ ಭದ್ರತೆಗೆ ಕಸರತ್ತು ನಡೆಸುತ್ತಿದ್ದಾರೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಗದ್ದುಗೆ ಅತಂತ್ರ ಸ್ಥಿತಿಗೆ ಬಂದಿದೆ. ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದ್ದರೂ ತಡೆಯಾಜ್ಞೆ ತೆರವುಗೊಳ್ಳುವುದರೊಳಗೆ ಮೇಲ್ಮನವಿ ಸಲ್ಲಿಸಲು ಚರ್ಚೆಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ 4 ನಗರಸಭೆ (ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು), 1 ಪುರಸಭೆ (ಬಾಗೇಪಲ್ಲಿ) ಹಾಗೂ 1 ಪಪಂ (ಗುಡಿಬಂಡೆ) ಇದೆ. ಈ ಪೈಕಿ ಮೀಸಲಾತಿ ಗೊಂದಲದಿಂದ ಗುಡಿಬಂಡೆ ಪಪಂಗೆ ಈವರೆಗೂ ಸದಸ್ಯರ ಚುನಾವಣೆ ಕೂಡ ನಡೆದಿಲ್ಲ. ಉಳಿದಂತೆ 5 ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳ ಆಯ್ಕೆಯಾಗಿದೆ. ಆದರೆ, ಹಿಂದೆ ಸರ್ಕಾರ ಹೊರಡಿಸಿರುವ ಮೀಸಲಾತಿ ಪಟ್ಟಿ ಹಿಂಪಡೆದು, ರೋಟೇಷನ್ ಪದ್ಧತಿ ಅನುಸರಿಸದೆ ಹೊಸದಾಗಿ ಅನುಕೂಲಕ್ಕೆ ತಕ್ಕಂತೆ ಮೀಸಲು ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ಕೆಲ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರ ವಿಚಾರ ನಡೆಸಿದ ಏಕ ಸದಸ್ಯಪೀಠ ವಿಚಾರಣೆ ನಡೆಸಿ ಎರಡನೇ ಮೀಸಲಾತಿ ಪಟ್ಟಿ ರದ್ದುಪಡಿಸಿದೆ.

ನ್ಯಾಯಾಲಯದ ಆದೇಶ ಶಾಕ್ : ನ್ಯಾಯಾಲಯದ ಆದೇಶವು ಜಿಲ್ಲೆಯಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೇ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಕ್ ನೀಡಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆಯೇ ನಗರಸಭೆ, ಪುರಸಭೆ ಸದಸ್ಯರ ಆಯ್ಕೆಯಾಗಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಗೊಂದಲ ಉಂಟಾಗಿತ್ತು. ಇದರ ನಡುವೆ ಹೊಸ ಮೀಸಲಾತಿ ಪಟ್ಟಿ ಪ್ರಕಾರ ಅಧಿಕಾರ ಸಿಕ್ಕರೂ ನ್ಯಾಯಾಲಯದ ಆದೇಶವು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಯಾರ‌್ಯಾರಿಗೆ ಸಂಕಷ್ಟ! : 4 ನಗರಸಭೆ ಹಾಗೂ 1 ಪುರಸಭೆಗೆ ಅ.8 ರಂದು ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿ ಅನ್ವಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆದಿದ್ದು, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷರಾಗಿ ಆನಂದರೆಡ್ಡಿ (ಸಾಮಾನ್ಯ ವರ್ಗ) ಮತ್ತು ಉಪಾಧ್ಯಕ್ಷರಾಗಿ ವೀಣಾರಾಮು (ಬಿಸಿಎಂ)(ಎ), ಗೌರಿಬಿದನೂರು ನಗರಸಭೆ ಅಧ್ಯಕ್ಷರಾಗಿ ಗಾಯತ್ರಿ (ಸಾಮಾನ್ಯ ವರ್ಗ) ಮತ್ತು ಉಪಾಧ್ಯಕ್ಷರಾಗಿ ಭಾಗ್ಯಮ್ಮ (ಎಸ್ಸಿ ಮಹಿಳೆ), ಚಿಂತಾಮಣಿ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೇಖಾ ಉಮೇಶ್ (ಎಸ್ಸಿ ಮಹಿಳೆ) ಗೆ ಮೀಸಲಾಗಿದ್ದ, ಉಪಾಧ್ಯಕ್ಷ ಸ್ಥಾನಕ್ಕೆ ಸುಹಾಸಿನಿ (ಬಿಸಿಎಂ), ಬಾಗೇಪಲ್ಲಿ ಪುರಸಭೆ ಅಧ್ಯಕ್ಷರಾಗಿ ಗುಲ್ನಾಜ್‌ಬೇಗ್ (ಬಿಸಿಎಂ(ಎ)) ಮತ್ತು ಉಪಾಧ್ಯಕ್ಷರಾಗಿ ಶ್ರೀನಿವಾಸ್ (ಸಾಮಾನ್ಯ ವರ್ಗ) ಆಯ್ಕೆಯಾಗಿದ್ದಾರೆ. ಶಿಡ್ಲಘಟ್ಟ ನಗರಸಭೆಯಲ್ಲಿ ಚುನಾವಣೆ ನಡೆದಿದೆಯಾದರೂ, ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಚುನಾವಣಾಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಫಲಿತಾಂಶ ಪ್ರಕಟಿಸಿಲ್ಲ.