ಹಾಸನ : ಕಳೆದ 30 ವರ್ಷಗಳಿಂದ ಬಿಜೆಪಿ ನಿಷ್ಟಾವಂತ ಕಾರ್ಯಕರ್ತನಾಗಿ ಅರಸೀಕೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತನಗೆ ಈ ಬಾರಿಯ ಟಿಕೆಟ್ ನೀಡಬೇಕು ಎಂದು ಅರಸೀಕೆರೆ ಬಿಜೆಪಿ ಮುಖಂಡ ಕಿಶೋರ್ ಕುಮಾರ್ ಮನವಿ ಮಾಡಿದರು.
ಇತ್ತೀಚೆಗೆ ಅರಸೀಕೆರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಗೊಂದಲದ ಬೆಳವಣಿಗೆಗೆ ಹೊರಗಿನಿಂದ ಬಂದಿರುವ ಅಭ್ಯರ್ಥಿಗಳೇ ಕಾರಣ. ಆದ್ದರಿಂದ ಈ ಬಾರಿ ಸ್ಥಳೀಯನಾದ ನನಗೆ ಟಿಕೆಟ್ ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಲಿಂಗಾಯಿತ ಸಮುದಾಯದ ಪ್ರಾಬಲ್ಯ ಹೊಂದಿರುವ ಅರಸೀಕೆರೆ ಕ್ಷೇತ್ರದಲ್ಲಿ ಸಾಕಷ್ಟು ಹಣ ಹಂಚಿಕೆ, ಆಮಿಷ ಒಡ್ಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಶಾಸಕರು ಸಾಮಾನ್ಯರನ್ನು ಕಡೆಗಣಿಸಿದ್ದಾರೆ. ಕೆಲ ರಸ್ತೆ ಅಭಿವೃದ್ಧಿ ಮಾಡುವುದೇ ಕ್ಷೇತ್ರದ ಸಮಗ್ರ ಅಭಿವೃದ್ಧಿ ಎಂಬಂತೆ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ನನಗೆ ಹಣ ಬಲ ಇಲ್ಲದಿದ್ದರೂ ಜಾತಿ ಬಲ ಹಾಗೂ ರಾಜಕೀಯ ಬಲ ಹೊಂದಿದ್ದೇನೆ. ಬಿಜೆಪಿ ಈ ಬಾರಿ ನನಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಇನ್ನೂ ಟಿಕೆಟ್ ನೀಡದಿದ್ದರೂ ಕೆಲವರು ತಾವೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಜನರಲ್ಲಿ ಗೊಂದಲ ಉಂಟು ಮಾಡುವ ಬದಲು ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವವರೆಗೂ ಕಾಯಬೇಕು ಎಂದು ಪರೋಕ್ಷವಾಗಿ ಎನ್.ಆರ್.ಸಂತೋಷ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.