ಕೊಳ್ಳೇಗಾಲ: ನಗರ ಸ್ಥಳೀಯ ಸಂಸ್ಥೆಗಳಿಗೆ ಇ-ಸ್ವತ್ತು (ನಮೂನೆ-3) ನೀಡುವ ಅಧಿಕಾರ ನೀಡುವಂತೆ ಗುರುವಾರ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೊಳ್ಳೇಗಾಲ ನಗರಸಭೆಯ ನಾಮ ನಿರ್ದೇಶನ ಸದಸ್ಯ ಮಧುಚಂದ್ರ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.
15 ದಿನಗಳ ಒಳಗೆ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡಬೇಕು, ಇಲ್ಲವಾದಲ್ಲಿ ಕೊಳ್ಳೇಗಾಲ ನಗರಸಭೆ ಮುಂಭಾಗದಲ್ಲಿ ಇ-ಸ್ವತ್ತು ನೀಡುವವರೆಗೂ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಇ-ಸ್ವತ್ತು ನೀಡುವ ವಿಚಾರವಾಗಿ ಈ ಎರಡು ಸುತ್ತೋಲೆಗಳಿಂದ ಸಾರ್ವಜನಿಕರಿಗೆ ಅನನುಕೂಲವಾಗಿದೆ. ಸರ್ಕಾರದ ಸುತ್ತೋಲೆ ಸಂ: ನಅಇ 7 ಟಿಟಿಪಿ 2017 ದಿನಾಂಕ: 22-03-2017 ಹಾಗೂ ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆ ಸಂ :23350 ಡಿ.ಎಂ.ಎ 121 ಜೆಪಿಎಸ್ 2017-18 ದಿನಾಂಕ 05/01/2018 ಸುತ್ತೋಲೆ ಆಗಿದ್ದು ಇದನ್ನು ಮರು ಪರಿಶೀಲಿಸಿ ಅಥವಾ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.
12 ಅಂಶ ಪರಿಗಣಿಸಿ ಇ-ಸ್ವತ್ತು ನೀಡಿ: ಈ 2 ಸುತ್ತೋಲೆಗಳ ಆದೇಶಕ್ಕೂ ಮೊದಲು ಸ್ಥಳೀಯ ಸಂಸ್ಥೆಗಳಲ್ಲಿ ಈ ಕೆಳಕಂಡಂತೆ ಖಾತ ವರ್ಗಾವಣೆ ಮಾಡಿ ಇ-ಸ್ವತ್ತುಗಳನ್ನು (ನಮೂನೆ-3) ನೀಡಲಾಗಿದೆ. ಭೂ ಪರಿವರ್ತನೆಯಾಗಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಯ ನಿರ್ಣಯದಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ದಾಖಲಾಗಿರುವ ಆಸ್ತಿಗಳು. ಈಗಾಗಲೇ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ರಚಿಸಿರುವ ಲೇಔಟ್/ ನಿವೇಶನ ಪ್ರಕರಣಗಳು, ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಅನುಮೋದನೆ ಪಡೆಯದೆ ಈಗಾಗಲೆ ಎಂಎಆರ್ 19ರಲ್ಲಿ ನಮೂದಿಸಿರುವ ನಿವೇಶನಗಳು. 2002-03ರಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ನಂತರ ನಗರ ವ್ಯಾಪ್ತಿಯಲ್ಲಿನ ಭೂ ಪರಿವರ್ತನೆಯಾಗದ ಸರ್ವೇ ನಂಬರ್‌ಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಹಾಗೂ ನಿವೇಶನಗಳಿಗೆ ತೆರಿಗೆ ಪಾವತಿಸಿಕೊಂಡು ನಮೂನೆ 3ರ ಪ್ರತಿಗಳನ್ನು ನೀಡಿ ದಾಖಲೂ ಮಾಡಲಾದ ಖಾತೆಗಳು ಸೇರಿದಂತೆ ಇತರ ಹಲವು ಅಂಶಗಳನ್ನು ಪರಿಗಣಿಸಿ ಸಾರ್ವಜನಿಕರ ಅನುಕೂಲವಾಗುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಇ-ಸ್ವತ್ತು (ನಮೂನೆ-3) ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.