ಜಿಲ್ಲೆ

ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ

ಕೂಡ್ಲಿಗಿ: ಮಹನೀಯರ ಉತ್ಸವಗಳು ಜನಮಾನಸದ ಉತ್ಸವಗಳು ಆಗಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಒನಕೆ ಓಬವ್ವ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಫೆ 24, 25 ರಂದು ಗುಡೇಕೋಟೆಯಲ್ಲಿ ಒನಕೆ ಓಬವ್ಬ ಉತ್ಸವ ಆಯೋಜಿಸಲಾಗಿದೆ. ಕಳೆದ ಬಾರಿ ಉತ್ಸವದ ಸಿದ್ಧತೆಗೆ ಸಮಯದ ಕೊರತೆಯಾಗಿತ್ತು. ಈ ಬಾರಿ ಸಾಕಷ್ಟು ಸಮಯ ಇರುವುದರಿಂದ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಇದು ಸರ್ಕಾರದ ಉತ್ಸವವಾಗಿರುವುದರಿಂದ ಶಿಷ್ಟಾಚಾರದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಕಲಾವಿದರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು. ಉತ್ಸವ ನಡೆಯುವ ಎರಡು ದಿನಗಳ ಮುಂಚೆ ಮದ್ಯದಂಗಡಿಗಳನ್ನು ಬಂದ್ ಮಾಡಬೇಕು ಎಂದು ಸೂಚಿಸಿದರು.

ಪಕ್ಕದ ಗ್ರಾಪಂ ಕಚೇರಿಗಳಿಂದ ಕಸ ವಿಲೇವಾರಿ ವಾಹನಗಳನ್ನು ತರಿಸಿಕೊಳ್ಳುವ ಮೂಲಕ ಇಡೀ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ತ್ಯಾಜ್ಯ ಕಂಡಬಂದರೆ ನಾನೇ ಸ್ವಚ್ಛತೆಗೆ ಮುಂದಾಗುವೆ. ಹಂಪಿ ಉತ್ಸವ ಮಾದರಿಯಲ್ಲಿ ಒನಕೆ ಓಬವ್ಬ ಉತ್ಸವ ನಡೆಯಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಸಿಪಿಐ ಸುರೇಶ್ ತಳವಾರ್ ಮಾತನಾಡಿ, ಉತ್ಸವದಲ್ಲಿ ಮನರಂಜನೆ ಕಾರ್ಯಕ್ರಮವನ್ನು ತಡರಾತ್ರಿವರೆಗೂ ಮುಂದುವರಿಸಬಾರದು. ಇದರಿಂದ ಬಂದೋಬಸ್ತ್ ಕಲ್ಪಿಸಲು ತೊಂದರೆ ಆಗುತ್ತದೆ ಎಂದು ತಿಳಿಸಿದರು. ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ಕೆ.ನರಸಪ್ಪ, ಬಿಇಒ ಪದ್ಮನಾಭ ಕರಣಂ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ವೆಂಕಟೇಶ್, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಕೆ. ಕೃಷ್ಣ, ಉಪನ್ಯಾಸಕ ನಾಗರಾಜ್ ಕೊಟ್ರಪ್ಪನವರ್, ಕಲಾವಿದ ಕೋಗಳಿ ಕೊಟ್ರೇಶ್, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.