ಬೂದಿಕೋಟೆ: ಜನಸಾಮಾನ್ಯರು ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಗ್ರಾಮದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜು ಹೇಳಿದರು.
ಬೂದಿಕೋಟೆ ಹೋಬಳಿಯ ಪಾತರಾಮಗೊಳ್ಳ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಡಿಭಾಗದ ಈ ಗ್ರಾಮಕ್ಕೆ ಇದುವರೆಗೂ ಜಿಲ್ಲಾಧಿಕಾರಿ ಬಂದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಮೊದಲ ಬಾರಿಗೆ ನಾನು ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಬಂದಿರುವುದು ನನ್ನ ಸೌಭಾಗ್ಯ ಎಂದರು.
ಗ್ರಾಮೀಣ ಜನರು ತಾಲೂಕು ಮತ್ತು ಜಿಲ್ಲಾಮಟ್ಟದ ವಿವಿಧ ಕಚೇರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋಗುವುದಕ್ಕೆ ಕಷ್ಟವಾಗುತ್ತದೆ. ಆದ್ದರಿಂದ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಕುಂತಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ ಸೇವೆ ಸಲ್ಲಿಸಲಿಕ್ಕೆ ನಾವೇ ನಿಮ್ಮ ಊರಿಗೆ ಬಂದಿದ್ದೇವೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ತಿಳಿಸಿ ನೋಂದಣಿ ಮಾಡಿಸಿ ಕಡಿಮೆ ಅವಧಿಯಲ್ಲಿ ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮದಲ್ಲಿನ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಬಗೆಹರಿಸದೇ ಇರುವ ಸಮಸ್ಯೆಗಳನ್ನು ಒಂದು ವಾರದ ಒಳಗೆ ಬಗೆಹರಿಸಲಾಗುತ್ತದೆ ಎಂದರು.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ತಹಸೀಲ್ದಾರ್ ಕಚೇರಿಯಲ್ಲಿ ಕೆಲಸಗಳು ಆಗದೆ ತೊಂದರೆ ಆಗಿದ್ದರೆ, ಅಂತಹ ಕೆಲಸಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಬಗೆಹರಿಸಲಾಗುತ್ತದೆ. ತಾಲೂಕು ಕಚೇರಿಯಲ್ಲಿ ತಾಲೂಕಿಗೆ ಸರ್ವೇ ಅಧಿಕಾರಿ ಒಬ್ಬರೇ ಇದ್ದು, ಸರ್ವೇ ಮಾಡಲು ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ 5 ಜನ ಸರ್ವೇ ಅಧಿಕಾರಿಗಳನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಕೆಲವೆಡೆ ಸಾಗುವಳಿ ಪತ್ರ ಹಾಗೂ ಪಹಣಿ ವಿತರಣೆ ಮಾಡಲಾಗಿದೆ. ಈಗ ಅರಣ್ಯ ಇಲಾಖೆಯವರು ಭೂಮಿ ನಮಗೆ ಸೇರಿದ್ದು ಎಂದು ಪೆನ್ಸಿಂಗ್ ಅಳವಡಿಸುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಎಂ.ದಯಾನಂದ, ತಾಪಂ ಇಒ ವೆಂಕಟೇಶಪ್ಪ, ಸರ್ವೇ ಇಲಾಖೆಯ ಭಾಗ್ಯಮ್ಮ, ಗ್ರೇಡ್ 2 ತಹಸೀಲ್ದಾರ್ ರಶ್ಮಿ, ಬಿ.ಇ.ಒ ಕೆಂಪಯ್ಯ, ವೃತ್ತ ನಿರೀಕ್ಷಕ ಆನಂದಕುಮಾರ್, ಸಿಡಿಪಿಒ ರಮ್ಯ, ಗುಲ್ಲಹಳ್ಳಿ ಪಿಡಿಒ ಶಿರೀನ್ ತಾಜ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.