ಬಾಗಲಕೋಟೆ: ೬೯ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸ್ಥಬ್ದಚಿತ್ರಗಳ ಪ್ರದರ್ಶನದಲ್ಲಿ ಬಾಗಲಕೋಟೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆಯ ಘಟಕ ಪ್ರಥಮ ಸ್ಥಾನ ಪಡೆಯಿತು.
ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ಥಬ್ದ ಚಿತ್ರಗಳ ಪ್ರದರ್ಶನದಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಸಂಗಮಗೊಳ್ಳುವ ಚಿಕ್ಕಸಂಗಮದ ಐತಿಹಾಸಿಕ ಸಂಗಮನಾಥನ ದೇವಾಲಯ ಬಿಂಬಿಸುವ ಸ್ಥಬ್ದಚಿತ್ರ ಇದಾಗಿದ್ದು, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರ ಆಕರ್ಷಣೀಯ ಕೇಂದ್ರವಾಗಿತ್ತು.
ಐತಿಹಾಸಿಕ ಐಹೊಳೆ, ಬನಶಂಕರಿ, ಪಟ್ಟದಕಲ್ಲು ಹಾಗೂ ಕೂಡಲಸಂಗ, ಜ್ಞಾನಪೀಠ ಪ್ರಶಸ್ತಿ ಪಡೆದ ಮಹನೀಯರ ಹಾಗೂ ಜೋಗತಿ ಮಂಜಮ್ಮ, ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕರಂಥಹರ ಭಾವಚಿತ್ರಗಳ ಪ್ರದರ್ಶನ ಬಿಂಬಿಸುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಥಬ್ದಚಿತ್ರ ದ್ವಿತೀಯ ಸ್ಥಾನ ಪಡೆದರೆ, ರೇಂಬೆ ಸಾಗಾಣಿಕೆ ಮನೆ, ರೈತರಿಗೆ ಉಚಿತವಾಗಿ ನೀಡುವ ಸೊಂಕುನಿವಾರಕ ಮತ್ತು ಸಸ್ಯ ಸಂವರ್ಧಕಗಳ ಮಾಹಿತಿಯನ್ನೊಳಗೊಂಡ ರೇಷ್ಮೆ ಇಲಾಖೆಯ ಸ್ಥಬ್ದಚಿತ್ರ ತೃತೀಯ ಸ್ಥಾನ ಪಡೆದುಕೊಂಡಿತು.
ಪ್ರಾರಂಭದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡಾಂಬೆಯ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ವಿ.ಪ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾಲಪದ ಕಲಾತಂಡಗಳು, ವಿವಿಧ ಇಲಾಖೆಯವರು ತಯಾರಿಸಿದ ಸ್ತಬ್ದ ಚಿತ್ರಗಳು ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯು ನವನಗರ ಬಸ್ ನಿಲ್ದಾಣ, ಎಲ್.ಐ.ಸಿ ವೃತ್ತದ ಮೂಲಕ ಹೆಸ್ಕಾಂ ಕಚೇರಿ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣಕ್ಕೆ ಅಂತ್ಯಗೊಂಡಿತು.