ಕೆ.ಆರ್.ಪೇಟೆ: ಭೂ ಸ್ವಾಧೀನ ಪರಿಹಾರ ತಾರತಮ್ಯ ವಿರೋಧಿಸಿ ತಾಲೂಕಿನ ಅಗ್ರಹಾರಬಾಚಹಳ್ಳಿ ಗೇಟ್ ಬಳಿ ಸಂತ್ರಸ್ತ ರೈತರು ಸ್ಥಗಿತಗೊಳಿಸಿದ್ದ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ(ಕೆಶಿಪ್)ಯ ಕೆ.ಆರ್.ಪೇಟೆ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶನಿವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಾರಂಭಿಸಲಾಯಿತು.
ಜು.6ರಲ್ಲಿ ಬೈ ಪಾಸ್ ಕಾಮಗಾರಿ ನಿರ್ಮಾಣಕ್ಕೆ ಕೆಶಿಪ್ ಅಧಿಕಾರಿಗಳು ಮುಂದಾದಾಗ ಭೂ ಸ್ವಾಧೀನ ಪರಿಹಾರ ನೀಡುವಲ್ಲಿ ತಾರತಮ್ಯ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ರಸ್ತೆ ನಿರ್ಮಾಣಕ್ಕೆ ಜಮೀನು ಕಳೆಕೊಂಡ ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿ, ಕಾಮಗಾರಿ ತಡೆದಿದ್ದರು.
ಆದರೆ ಶನಿವಾರ ಮುಂಜಾನೆ ನೂರಾರು ಪೊಲೀಸರ ಬಂದೋಬಸ್ತ್‌ನಲ್ಲಿ ಅಧಿಕಾರಿಗಳು ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭಿಸಿದರು. ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ರೈತರು ಎತ್ತಿನಗಾಡಿಗಳೊಂದಿಗೆ ಸ್ಥಳದಲ್ಲಿ ಜಮಾವಣೆಗೊಂಡು ಕಾಮಗಾರಿಗೆ ತಡೆಯೊಡ್ಡಿದರು.
ನೇರ ಖರೀದಿಯಡಿ ರಸ್ತೆಗೆ ಸ್ವಾಧೀನಗೊಳ್ಳುವ ರೈತರ ಜಮೀನನ್ನು ಗುಂಟೆಗೆ 15 ರಿಂದ 20 ಸಾವಿರ ರೂ. ನೀಡಿ ಖರೀದಿಸಲಾಗಿದೆ. ಇದಕ್ಕೆ ಒಪ್ಪದ ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿ ರಸ್ತೆಗೆ ಸ್ವಾಧೀನವಾದ ಭೂಮಿಗೆ ಲಕ್ಷಾಂತರ ಪರಿಹಾರ ಪಡೆದಿದ್ದಾರೆ. ಉಳಿದ ರೈತರಿಗೆ ಅನ್ಯಾಯವಾಗಿದೆ. ನ್ಯಾಯಾಲಯದಲ್ಲಿ ನೀಡಿರುವ ಆದೇಶ ನೀಡಿರುವ ಪರಿಹಾರದ ದರವನ್ನು ನೇರ ಖರೀದಿಯಡಿ ಜಮೀನು ನೀಡಿರುವ ರೈತರಿಗೂ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಲ್ಲದೆ ರಸ್ತೆ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿದ್ದ ಯಂತ್ರಗಳನ್ನು ತಡೆಯಲು ರೈತರು ಯತ್ನಿಸಿದಾಗ ಪೊಲೀಸರು 18 ರೈತರನ್ನು ಬಂಧಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಂದು ಗಂಟೆ ಕಾಲ ವಶದಲ್ಲಿರಿಸಿಕೊಂಡು ನಂತರ ಬಿಡುಗಡೆ ಮಾಡಿದರು. ಬಂಧನಕ್ಕೆ ಹೆದರಿದ ಕೆಲ ರೈತರು ಸ್ಥಳದಿಂದ ಕಾಲ್ಕಿತ್ತರು.
ಶಾಸಕ ಎಚ್.ಟಿ.ಮಂಜು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ತಾರತಮ್ಯ ಧೋರಣೆಯಿಂದ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ರೈತರ ಗಮನಕ್ಕೆ ಬರದಂತೆ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಬೆಳಗಿನ ಜಾವವೇ ಕಾಮಗಾರಿ ಆರಂಭಿಸಿದ್ದೀರಿ. ಕಾಮಗಾರಿ ಆರಂಭಿಸುವ ವಿಷಯವನ್ನು ನನ್ನ ಗಮನಕ್ಕೂ ತಂದಿಲ್ಲ. ರೈತರಿಗೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಉತ್ತರಿಸಿದ ಎಸಿ ನಂದೀಶ್, ನಮ್ಮ ಹಂತದಲ್ಲಿ ಏನು ಮಾಡಲು ಆಗುವುದಿಲ್ಲ. ಸರ್ಕಾರದ ಹಂತದಲ್ಲಿ ಸಮಸ್ಯೆ ಬಗೆಹರಿಯಬೇಕು ಎಂದು ತಿಳಿಸಿದರು. ಕೂಡಲೇ ಸರ್ಕಾರದ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಶಾಸಕ ಸೂಚನೆ ನೀಡಿ ನಿರ್ಗಮಿಸಿದರು. ಕಾಮಗಾರಿ ಮುಂದುವರೆದಿದೆ.
ಕೆಶಿಫ್ ಇಇ ಶಿವಲಿಂಗೇಗೌಡ, ತಹಸೀಲ್ದಾರ್ ನಿಸರ್ಗ ಪ್ರಿಯಾ, ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ಇನ್ಸ್‌ಪೆಕ್ಟರ್‌ಗಳಾದ ದೀಪಕ್, ಜಗದೀಶ್, ರೈತರಾದ ಚಿಕ್ಕೋನಹಳ್ಳಿ ಚೇತನ್‌ಕುಮಾರ್, ಜಗದೀಶ್, ಈರೇಗೌಡ, ನಾಗರಾಜು, ನಂಜೇಗೌಡ, ಸುಬ್ಬೇಗೌಡ, ಬೊಮ್ಮರೇಗೌಡ, ಜಯರಾಮು, ಮಂಜೇಶ್, ಅಶೋಕ್, ಕುಮಾರ್, ನಾಗೇಂದ್ರ, ರಾಮಚಂದ್ರು, ಪವನ್, ಚಿಕ್ಕೋಶಹಳ್ಳಿ ಜಗದೀಶ್, ಮಹೇಶ್, ಅಗ್ರಹಾರಬಾಚಹಳ್ಳಿ ಚನ್ನೇಗೌಡ, ಶ್ರೀನಿವಾಸ್, ಜಲೇಂದ್ರ, ಪ್ರದೀಪ್ ಸೇರಿ ನೂರಾರು ರೈತರು ಇದ್ದರು.