ಕೋಲಾರ : ಸ್ತ್ರೀಶಕ್ತಿ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಸದಸ್ಯರಿಗೆ ಹೆಚ್ಚಾಗಿ ಸಾಲ ಒದಗಿಸಲು ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮುಂದೆ ಬರಬೇಕು. ಇಲಾಖೆಗಳು ಸಹಾಯಧನ ಒದಗಿಸುವುದರ ಜತೆಗೆ ಫಲಾನುಭವಿಗಳು ಪಡೆದ ಸಾಲ ಸದ್ಬಳಸಿಕೊಳ್ಳುವಂತೆ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಯತ್ ಸಭಾಂಗಣದಲ್ಲಿ ಶನಿವಾರ ಜಿಪಂ, ಲಿಡ್‌ಬ್ಯಾಂಕ್ ಆಯೋಜಿಸಿದ್ದ ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲ ಪಡೆದು ಸದ್ವಿನಿಯೋಗಪಡಿಸಿಕೊಂಡಿದ್ದರೆ. ಅಷ್ಟೇ ಅಲ್ಲದ ಸಮರ್ಪಕವಾಗಿ ಮರುಪಾವತಿ ಮಾಡುತ್ತಿದ್ದರೆ. ಪರಿಸ್ಥಿತಿ ಹೀಗಿದ್ದರೂ ಬ್ಯಾಂಕ್‌ಗಳಿಂದ ಸಲವಿತರಣೆ ಮಾಡಲು ಮೀನಮೇಷ ಎಣಿಸುವುದು ಏಕೆ ಎಂದು ಪ್ರಶ್ನಿಸಿದರು.
ಬ್ಯಾಂಕ್‌ಗಳವರು ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಸ್ತ್ರೀಶಕ್ತಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳ ಮಾಹಿತಿ ಹೊಂದಿರಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಇದರ ಜತೆಗೆ ತ್ವರಿತ ಗತಿಯಲ್ಲಿ ಸಾಲ ವಿತರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಂತೆ ಬೀದಿ ಬದಿ ವ್ಯಾಪಾರಿಗಳಿಗೆ ೧೦ ಸಾವಿರ ರೂ., ೨೦ ಸಾವಿರ ರೂ., ಮತ್ತು ೫೦ ಸಾವಿರ ರೂ. ಸಾಲ ನೀಡಲಾಗುತ್ತಿದೆ. ಇದು ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕು. ಬಡವರು ಸಾಲ ಮರುಪಾವತಿ ಸರಿಯಾಗಿ ಮಾಡುತ್ತಾರೆ ಎಂಬುದನ್ನು ನಾವು ಮರೆಯಬಾರದು. ಸಾಲ ವಿತರಣೆ ಗುರಿ ಸಾಧಿಸುವುದಷ್ಟೇ ಅಲ್ಲ, ಮಾನವೀಯತೆ ನೆಲೆಗಟ್ಟಿನಲ್ಲಿ ಸಾಲ ಮರುಪಾವತಿ ಮಾಡುವ ಜನರಿಗೆ ತಿರುಗಾಡಿಸದೆ ಮಾಡಬೇಕಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಎಸ್.ಸುಧಿರ್ ಮಾತನಾಡಿ, ಶುನ್ಯ ಬ್ಯಾಲೆನ್ಸ್ ಖಾತೆ ಹೊಂದಿದ ಗ್ರಾಹಕರಿಗೆ ಸಾದ್ಯವಾದಷ್ಟೂ ಸ್ವದೇಶಿಯ ರುಪೇ ಕಾರ್ಡ್ ಒದಗಿಸಬೇಕು. ಪಿಎಂಎಸ್‌ಬಿವೈ, ಪಿಎಂಜೆಜೆವೈನಿಂದ ಒಟ್ಟು ೬ಲಕ್ಷ ರೂ.ವಿಮೆ ಸಿಗುತ್ತದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ಮಾತನಾಡಿ, ಪ್ರಧಾನ ಮಂತ್ರಿ ಕಿರು ಆಹಾರ ಉದ್ಯಮಗಳ ಔಪಚಾರೀಕರಣ ಯೋಜನೆಯಡಿ ಆಹಾರ ಪದಾರ್ಥಗಳ ಸಂಸ್ಕರಣೆ ಘಟಕಗಳಿಗೆ ಗರಿಷ್ಠ ೧೦ ಲಕ್ಷ ರೂ. ಸಾಲ ಒದಗಿಸಲಾಗುತ್ತಿದೆ. ಫಲಾನುಭವಿಗೆ ಶೇ.೩೫ರಿಯಾಯಿತಿ ಧನವಿರುತ್ತದೆ. ಫಲಾನುಭವಿ ಶೇ.೧೦ ಮೂಲಧನ ಪಾವತಿಸಬೇಕಾಗುತ್ತದೆ. ಪ್ರತಿ ಬ್ಯಾಂಕ್ ಶಾಖೆಗಳ ವ್ಯಾಪ್ತಿಯಲ್ಲಿ ಎರಡು ಮೂರು ಮಂದಿಗೆ ಸಾಲ ವಿತರಿಸಬಹುದು ಎಂದರು.
ಇನ್ನು ಜಿಲ್ಲೆಯಲ್ಲಿ ೮೯೭ ಹೆಕ್ಟೇರ್‌ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಕೋಲಾರದಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಧ್ಯೆಪ್ರವೇಶಿಸಿ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ಸಾವಯವ ಕೃಷಿ ಉತ್ತೇಜಿಸುವ ಕೆಲಸವಾಗಬೇಕು. ಸಿರಿಧಾನ್ಯಗಳಿಗೆ ಉತ್ತಮ ಬೆಲೆ ಇರುವುದರಿಂದ ಇವುಗಳನ್ನು ಹೆಚ್ಚಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು. ಸಿರಿಧಾನ್ಯ ಮೇಳ ಮಾಡಿ ಈ ಧಾನ್ಯಗಳ ಮಾರಾಟ, ಸಂಸ್ಕರಣೆ, ದರ, ರಫ್ತು ಮಾಡುವುದು ಸೇರಿ ಇತರೆ ವಿಷಯಗಳನ್ನು ಅರಿಯಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕೆ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಜಿಪಂ ಸಿಇಒ ಪದ್ಮಾಬಸಂತಪ್ಪ, ಅರ್‌ಬಿಐನ ಎಫ್‌ಐಡಿಡಿ ವ್ಯವಸ್ಥಾಪಕಿ ಜೀವಿಕಾ, ನಬಾರ್ಡ್ ಡಿಡಿಎಂ ಕೆ.ಜಿ.ಮನೋಜ್ ಕುಮಾರ್, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಎಂ.ಅಶೋಕ್ ಕುಮಾರ್ ಮತ್ತಿತರರು ಇದ್ದರು.
ಕೋಲಾರ - ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಸ್ತ್ರೀಶಕ್ತಿ ಸಂಘಗಳನ್ನು ಸೃಷ್ಠಿಸಿ ಸಾಲ ವಿತರಿಸಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳವರು ಧರ್ಮಸ್ಥಳ ಮತ್ತು ಸ್ತ್ರೀಶಕ್ತಿ ಸಂಘಗಳು ಸಕ್ರಿಯವಾಗಿ ಸಾಲ ಮರುಪಾವತಿ ಮಾಡುವುದನ್ನು ಅರಿತು ಸಾಲ ವಿತರಣೆಗೆ ಮುಂದಾಗಬೇಕು. ಇಲ್ಲದ ಸಬೂಬು ಹೇಳಿ ಬಡವರನ್ನು ಸುತ್ತಿಸುವ ಬದಲು ಅರ್ಹರಿಗೆ ಸಾಲ ವಿತರಿಸಿದರೆ ಸಮರ್ಪಕರೀತಿಯಲ್ಲಿ ಸಾಲ ಮರುಪಾವತಿಯಾಗಿ ಬ್ಯಾಂಕ್‌ಗಳೂ ಲಾಭದ ಹಾದಿಯಲ್ಲಿ ಸಾಗುತ್ತವೆ ಎಂದು ಸಂಸದ ಎಸ್.ಮುನಿಸ್ವಾಮಿ ಅಫಿಪ್ರಾಯಪಟ್ಟರು.