ಕಲಬುರಗಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ್ ಹತ್ಯೆ ಸೇರಿ ರಾಜ್ಯದಲ್ಲಿ ನಿರಂತರವಾಗಿ ಸ್ತ್ರೀಯರ ಮೇಲೆ ಹಲ್ಲೆ ನಡೆಯುತ್ತಿದ್ದರೂ, ಹಲ್ಲೆ ಮಾಡಿದವರನ್ನು ರಕ್ಷಿಸುವ ರೀತಿ ಸಿದ್ದರಾಮಯ್ಯ, ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪುರ ಕಿಡಿ ಕಾರಿದರು.
ಶಕ್ತಿ ಕೇಂದ್ರದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಕಾಂಗ್ರೆಸ್ ರ‍್ಯಾಲಿಯಲ್ಲಿ ಬಂದೂಕು, ಬಾಂಬ್ ಬ್ಲಾಸ್ಟ್ ಸೇರಿ ಸರಣಿ ಕಾನೂನು ಉಲ್ಲಂಘನೆ ನಡೆಯುತ್ತಿವೆ. ಮಹಿಳೆಯರು ಮನೆಯಿಂದ ಹೊರಬರದಂತ ಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊಲೆಗಡುಕರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ ಕೊಟ್ಟರೆ ನಾವೇ ತಕ್ಕ ಶಾಸ್ತಿ ಮಾಡುತ್ತೇವೆ. ಕೂಡಲೇ ಆತನನ್ನು ಶೂಟೌಟ್ ಮಾಡಬೇಕು ಇಲ್ಲವೇ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಮತ್ತು ಸರ್ಕಾರಕ್ಕೆ ಸಂಬಂಧವಿರದಂತೆ ವರ್ತನೆಗಳು ಕಂಡು ಬರುತ್ತಿವೆ. ಸರ್ಕಾರದ ನಡೆ ಖಂಡಿಸಿ ಕಲಬುರಗಿಯಲ್ಲಿ ಸೋಮವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಶೋಭಾ ಬಾಣಿ ಮಾತನಾಡಿ, ಪಿಯುಸಿ, ಯುಪಿಎಸ್‌ಸಿಯಲ್ಲಿ ಮಹಿಳೆಯರೇ ಟಾಪರ್ ಎನ್ನುತ್ತಾರೆ. ಆದರೆ ಅವರಿಗೆ ರಕ್ಷಣೆ ನೀಡುವುದನ್ನು ಸರ್ಕಾರ ಮರೆತ್ತಿದೆ. ಕಠಿಣ ಕ್ರಮ ಎನ್ನದೇ ಶೀಘ್ರ ನೇಹಾ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಸಾವಿತ್ರಿ ಕುಳಗೇರಿ ಮಾತನಾಡಿ, ಮಕ್ಕಳು ಹೇಗೆ ಹೊರಗೆ ಬರಬೇಕು ಎಂಬ ಆತಂಕ ಕಾಡುತ್ತಿದೆ. ಉಚಿತ ಬಸ್ ಕೊಟ್ಟು ರಕ್ಷಣೆ ಇಲ್ಲದಿದ್ದರೆ ಬೀದಿ ಹೆಣವಾಗಬೇಕೇ ಎಂದು ಪ್ರಶ್ನಿಸಿದರು. ಶೋಭಾ ಬಾಗೇವಾಡಿ, ಗೌರಿ ಚಿಚಕೋಟಿ, ಸುಜ್ಞಾನಿ ಪೊದ್ದಾರ, ಜ್ಯೋತಿ ಶಹಾಬಾದಕರ್, ಮೀರಾ ಚೌಡಾಪುರ, ಸುಶೀಲಾಬಾಯಿ ರಾಠೋಡ್, ನಂದಾ ಇತರರಿದ್ದರು.