ಜಿಲ್ಲೆ

ಸ್ತ್ರೀ ಸರ್ವತೋಮುಖ ಬೆಳವಣಿಗೆಗೆ ಸಹಕಾರ ಅಗತ್ಯ

ಸೇಡಂ: ಸಮಾಜ ಮಹಿಳೆಯರ ಬಗ್ಗೆ ಕೇವಲ ಗೌರವ ಬೆಳೆಸಿಕೊಂಡರೆ ಸಾಲದು. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಸ್ಥಾನ ನೀಡಬೇಕು. ಅಂದಾಗಲೇ ಮಹಿಳಾ ಸಮಾನತೆ ಸಾಧ್ಯ ಎಂದು ಉಪನ್ಯಾಸಕಿ ಸುಜಾತಾರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ ವಿಶ್ವ ಮಹಿಳಾ ಸಮಾನತೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ದಕ್ಷತೆ, ಸಮರ್ಪಣಾ ಮನೋಭಾವ, ಶಾಂತಿ, ತಾಳ್ಮೆ ಹೆಚ್ಚಿರುತ್ತದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪುರುಷ ಪ್ರಧಾನ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.
ಸಹ ಶಿಕ್ಷಕಿ ಮಾಧವಿ ಪುರಂದರ್ ಮಾತನಾಡಿ, ಯಾರೊಂದಿಗೂ ಹೊಲಿಕೆ ಮಾಡಿಕೊಂಡು ಕುಗ್ಗುವುದು ಬೇಡ, ಪ್ರತಿಯೊಬ್ಬರಲ್ಲಿಯೂ ತಮ್ಮದೇ ಸಾಮಥ್ರ್ಯವಿದೆ. ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆದು ಜ್ಞಾನವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲ ಬನ್ಸಿಲಾಲ್ ಚವ್ಹಾಣ್, ಉಪನ್ಯಾಸಕರಾದ ಎಚ್.ಬಿ.ಪಾಟೀಲ್, ಹಣಮಂತ ಕೋರೆ, ಸ್ಥಳೀಯ ಪ್ರೌಢಶಾಲಾ ಮುಖ್ಯಶಿಕ್ಷಕ ಸತ್ಯಕುಮಾರ ಭಾಗೋಡಿ ಮಾತನಾಡಿದರು.
ಉಪನ್ಯಾಸಕರಾದ ಪಂಡರಿನಾಥ ಕ್ಷೀರಸಾಗರ, ಸಂಜೀವಪ್ಪ ಯಾಧವ, ಪ್ರಮುಖರಾದ ಸಂಗಪ್ಪ ಬಡಿಗೇರ, ಹುಸೇನಸಾಬ್, ಜಯಶ್ರೀ ಬಡಿಗೇರ, ಕವಿತಾ ಬಾವೂರ್, ಜ್ಯೋತಿಲಕ್ಷ್ಮೀ ಪಾಟೀಲ್, ನಾಗಮ್ಮ ಪಿಲ್ಲಿ, ಮೇಘಾ ಜೇಮಶೆಟ್ಟಿ, ಫರ್ಜನಾಬೇಗಂ, ಫಕೀರ್ ಅಹ್ಮದ್ ಇದ್ದರು.