ಜಿಲ್ಲೆ

ಸ್ತ್ರೀ ಸಬಲೀಕರಣಕ್ಕೆ ಸರ್ಕಾರ ಆದ್ಯತೆ

ಚಿತ್ರದುರ್ಗ: ಸ್ತ್ರೀಯರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಸಲಹೆ ನೀಡಿದರು.

ನಗರದ ಒನಕೆ ಓಬವ್ವ ವೃತ್ತ ಸಮೀಪದ ಮಹಿಳಾ ಸೇವಾ ಸಮಾಜ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾಜದ 94ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಮಹಾರಾಜರು ಮಹಿಳೆಯರ ಹಿತಾಸಕ್ತಿಯೊಂದಿಗೆ ಉಚಿತವಾಗಿ ನೀಡಿದ ಜಾಗವನ್ನು ಸದ್ಬಳಕೆ ಮಾಡಿಕೊಂಡು ಸೇವಾ ಸಮಾಜ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವುದೇ ಒಂದು ಸಂಘ ಸುಸೂತ್ರವಾಗಿ ನಡೆಸಿಕೊಂಡು ಹೋಗುವುದು ಕಷ್ಟ. ಆದರೆ, ಇದನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಸಂತಸದ ಸಂಗತಿ. ಜಿಲ್ಲೆಯಲ್ಲಿ 10,200 ಸ್ವಸಹಾಯ ಸಂಘಗಳಿವೆ. 1.35 ಲಕ್ಷ ಕುಟುಂಬಗಳು ಇದರಲ್ಲಿ ಸೇರಿಕೊಂಡಿವೆ. ಸದಸ್ಯರಿಗೆ ಸಾಲ ನೀಡುವುದಕ್ಕಾಗಿ ಕೋಟ್ಯಂತರ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಮಹಿಳೆಯರು ಆರ್ಥಿಕವಾಗಿ ಸದೃಢ ಆಗುವುದರ ಜತೆಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒಲವು ತೋರಬೇಕು. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಸ್ತ್ರೀಯರಿಗೆ ಎಲ್ಲ ರಂಗಗಳಲ್ಲೂ ವಿಫುಲ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ದಿನೇ ದಿನೆ ಸದೃಢರಾಗುತ್ತಿದ್ದಾರೆ. ಮಕ್ಕಳಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸುತ್ತಿದ್ದು, ಮನೆಯ ಒಳಗೂ ಮತ್ತು ಹೊರಗೂ ದುಡಿಯುತ್ತಿದ್ದಾರೆ ಎಂದರು.
ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ, ಕಾರ್ಯದರ್ಶಿ ಲತಾ, ವೀಣಾ, ವಿಜಯ, ಭಾರತಿ, ನಾಗರತ್ನಾ ಇತರರಿದ್ದರು.