ಬಸವಕಲ್ಯಾಣದಲ್ಲಿ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮೂರ್ತಿ ಅನಾವರಣ ಹಾಗೂ ಜಯಂತ್ಯುತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಅನುಭಾವ ಗೋಷ್ಠಿಯನ್ನು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ, ಪೂಜ್ಯ ಸತ್ಯಕ್ಕತಾಯಿ, ಪೂಜ್ಯ ಗಾಯಂತ್ರಿತಾಯಿ ಉಪಸ್ಥಿತರಿದ್ದರು. 
ಜಿಲ್ಲೆ

ಸ್ತ್ರೀ ಕುಲಕ್ಕೆ ಅಕ್ಕಮಹಾದೇವಿ ಮಾದರಿ

ಬಸವಕಲ್ಯಾಣ: ವಿಶ್ವದ ಮೊದಲ ಕವಯತ್ರಿ ಅಕ್ಕಮಹಾದೇವಿ ಇಡೀ ಮಹಿಳಾ ಕುಲಕ್ಕೆ ಮಾದರಿ. ಜೀವನದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಅಕ್ಕನ ವಚನ ದಿವ್ಯ ಔಷಧಿಯಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಹೇಳಿದರು.

ಅಕ್ಕಮಹಾದೇವಿ ಅನುಭಾವ ಪೀಠದಿಂದ ಬಂದವರ ಓಣಿ ಗವಿಯಲ್ಲಿ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮೂರ್ತಿ ಅನಾವರಣ ಮತ್ತು ಜಯಂತ್ಯುತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಅನುಭಾವ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಹೆದರದಿರು ಮನವೆ ಬೆದರದಿರು ತನುವೆ, ನಿಜವನರಿತು ನಿಶ್ವಿಂತವಾಗಿರು ಎಂಬ ಅಕ್ಕನ ವಚನ ಪ್ರಸ್ತಾಪಿಸಿ ಮಾತನಾಡಿದ ಅವರು, ಜೀವನದಲ್ಲಿ ಬರುವ ಸಮಸ್ಯೆ ಮತ್ತು ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಗುರಿ ತಲುಪಲು ಅಕ್ಕನ ವಚನ ಸ್ಫೂರ್ತಿಯಾಗಿದೆ ಎಂದರು.

ನೇತೃತ್ವ ವಹಿಸಿದ್ದ ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಅಕ್ಕನ ಆದರ್ಶ ಬದುಕು ಮತ್ತು ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು, ನೆಮ್ಮದಿಯಿಂದ ಬದುಕಲು ಎಲ್ಲರೂ ಅಕ್ಕನ ವಚನಗಳನ್ನು ಅಧ್ಯಯನ ಮಾಡಿ ಅವುಗಳ ಆಶಯದಂತೆ ಬದುಕಬೇಕು ಎಂದು ಸಲಹೆ ನೀಡಿದರು.

ಗುಣತೀರ್ಥವಾಡಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಾತ್ವಿಕರು, ಸತ್ಯಶೋಧಕರು, ಆತ್ಮ ಪರಿಶೋಧಕರಿದ್ದ ಪಾವನ, ಅಕ್ಕಮಹಾದೇವಿ ಲಿಂಗಾನುಷ್ಠಾನ ಮಾಡಿದ ಪವಿತ್ರ ಸ್ಥಳ ಬಂದವರ ಓಣಿ. ಇಲ್ಲಿ ಅಕ್ಕನ ಮೂರ್ತಿ ಸ್ಥಾಪನೆ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕ ಮಾತನಾಡಿದರು. ಮನಗುಳಿ ವಿರಕ್ತಮಠದ ಶ್ರೀ ವಿರತೀಶಾನಂದ ಸ್ವಾಮೀಜಿ, ಯಮಕನಮರಡಿ ಶ್ರೀ ಸಿದ್ಧಬಸವ ದೇವರು, ಬಾದಾಮಿ ಶ್ರೀ ಮಹಾಂತ ಬಸವಲಿಂಗ ಸ್ವಾಮೀಜಿ, ಶ್ರೀ ಪ್ರಭುಶ್ರೀ ತಾಯಿ, ಪೂಜ್ಯ ಗಾಯತ್ರಿತಾಯಿ ಮಾತನಾಡಿದರು.

ಶ್ರೀ ಶಿವಾನಂದ ಸ್ವಾಮೀಜಿ, ಪೂಜ್ಯ ಸತ್ಯದೇವಿ ತಾಯಿ, ಮಾತೆ ಚಂದ್ರಕಲಾ ತಾಯಿ, ಮಾತೆ ಸುಗುಣತಾಯಿ, ಪೂಜ್ಯ ಇಂದುಮತಿ ತಾಯಿ, ಪೂಜ್ಯ ಕಲ್ಯಾಣಮ್ಮ, ಡಾ.ಮಂಜುನಾಥ ಉಪಸ್ಥಿತರಿದ್ದರು. ಬಿಕೆಡಿಬಿ ಆಯುಕ್ತ ಜಗನ್ನಾಥರೆಡ್ಡಿ ಧ್ವಜಾರೋಹಣ, ನಿವೃತ್ತ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಗುರುಪೂಜೆ ನೆರವೇರಿಸಿದರು. ರಂಜನಾ ಭೂಶೆಟ್ಟಿ ಮತ್ತು ರಾಮಚಂದ್ರ ಕಲ್ಲಹಿಪ್ಪರ್ಗಾ ವಚನ ಸಂಗೀತ ನಡೆಸಿಕೊಟ್ಟರು. ರೇಖಾ ಗುದಗೆ ನಿರೂಪಣೆ ಮಾಡಿದರು.

ನಿರಂತರ ಪ್ರಯತ್ನ, ಸಂಕಲ್ಪ ಸಿದ್ಧಿಯಿಂದ ಅಸಾಧ್ಯವಾದುದ್ದನ್ನು ಸಾಧಿಸಲು ಅಕ್ಕಮಹಾದೇವಿ ವಚನಗಳೇ ಪ್ರೇರಣೆ. ಶರಣ ಚಳವಳಿ, ಸ್ವಾಭಿಮಾನದ ಪ್ರತೀಕವಾಗಿ ಸ್ರ್ತೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿ ಅಕ್ಕಮಹಾದೇವಿ. ೧೨ನೇ ಶತಮಾನದಲ್ಲಿ ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಬರುವ ಶರಣರು ಪಾದಸ್ಪರ್ಶ ಮಾಡಿದ ಪುಣ್ಯಸ್ಥಳ ಬಂದವರ ಓಣಿ. ಇಲ್ಲಿ ಅಕ್ಕನ ಮೂರ್ತಿ ಸ್ಥಾಪನೆ ಐತಿಹಾಸಿಕ ಸಮಾರಂಭ.

| ಶ್ರೀ ಗುರುಬಸವ ಪಟ್ಟದ್ದೇವರು

ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

ವೈರಾಗ್ಯನಿಧಿ ಅಕ್ಕಮಹಾದೇವಿ ಶರಣರಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನು ತ್ಯಜಿಸಿ ಎದುರಿಸಿದ ಕಷ್ಟ-ಪರೀಕ್ಷೆಗಳು ಅಪಾರ. ಸಾಕ್ಷಾತ್ ಶಿವನನ್ನು ಪತಿ ಎಂದು ಸ್ವೀಕರಿಸಿ ಕೇಶಾಂಬರಿಯಾಗಿ ಹೊರಟಿದ್ದ ಅಕ್ಕನ ಜೀವನ, ಆದರ್ಶ ಎಲ್ಲರಿಗೂ ಮಾದರಿ.

| ಪೂಜ್ಯ ಸತ್ಯಕ್ಕತಾಯಿ