ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಉದ್ಘಾಟಿಸಿದರು. ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಮಲ್ಲಮ್ಮ ಪಾಟೀಲ್, ಮಲ್ಲಮ್ಮ ನಾಗನಕೇರೆ ಇತರರಿದ್ದರು. 
ಜಿಲ್ಲೆ

ಸ್ತೀಕುಲಕ್ಕೆ ಸಮಾನತೆ ಕಲ್ಪಿಸಿದ ಬಸವಣ್ಣ

ಭಾಲ್ಕಿ ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳಾ ಕುಲಕ್ಕೆ ಸಮಾನತೆ ತತ್ವ ಪ್ರತಿಪಾದಿಸಿ ಸರ್ವರು ಸಮಾನರು ಎಂಬ ಸಂದೇಶ ಸಾರಿದ್ದರು ಎಂದು ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತುಳಿತಕ್ಕೊಳಗಾದವರನ್ನು ಮೇಲೆತ್ತುವ ಕೆಲಸ ಬಸವಣ್ಣನವರು ಮಾಡಿದ್ದರು. ಅಂತರ್ಜಾತಿ ವಿವಾಹ ಮಾಡಿಸಿ ಸಮಾನತೆ ಸಾರಿದ್ದರು. ಸಂವಿಧಾನದ ಆಶಯ ವಚನ ಸಾಹಿತ್ಯದಲ್ಲಿ ಅಡಗಿದೆ ಎಲ್ಲರೂ ವಚನ ಸಾಹಿತ್ಯವನ್ನು ಪಾಲಿಸಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಕಾರ್ಯಕ್ರಮ ಉದ್ಘಾಟಿಸಿದರು. ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬೀದರ್ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸುವರ್ಣಾ ಅಮೃತರಾವ ಚಿಮಕೋಡೆ ಅನುಭಾವ ನೀಡಿದರು. ಕಸಾಪ ಮಹಿಳಾ ಪ್ರತಿನಿಧಿ ಮಲ್ಲಮ್ಮ ಪಾಟೀಲ್ ಬಸವ ಗುರುವಿನ ಪೂಜೆ ನೆರವೇರಿಸಿದರು.

ಮಲ್ಲಮ್ಮ ನಾಗನಕೇರೆ ವಚನ ಪಠಿಸಿದರು. ಆರತಿ ಪಾತ್ರೆ ನಿರೂಪಣೆ ಮಾಡಿ ವಂದಿಸಿದರು.