ಜಿಲ್ಲೆ

ಸ್ಟೇ ತರುವಂಥ ನನ್ನ ಯಾವುದೇ ಸಿಡಿಗಳಿಲ್ಲ ಎಂದ ಎಚ್‌ಡಿಕೆ

ವಿಜಯವಾಣಿ ಸುದ್ದಿಜಾಲ ಕಾರವಾರ
ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಸ್ಟೇ ತರುವಂಥ ಯಾವುದೇ ಸಿಡಿಗಳಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೊನ್ನಾವರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಡವರ ಬಗ್ಗೆ ಕಣ್ಣಲ್ಲಿ ನೀರು ಹಾಕಿದ ಅವರಿಗೆ ಸಹಾಯ ಮಾಡಿದ ಸಿಡಿ ಮಾಡಬಹುದು ಅಷ್ಟೇ ಎಂದರು.
ಯಡಿಯೂರಪ್ಪ ಅವರಿಗೆ ನಾನು ಸಹಾಯ ಮಾಡದಿದ್ದರೆ ಇಂದು ವಿಜಯೇಂದ್ರ ಇರುತ್ತಲೇ ಇರಲಿಲ್ಲ. ಪೇಶ್ವೆ ಡಿಎನ್‌ಎ ಇದ್ದವರು ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದರು. ಆಗ ಅವರು ಜೆಡಿಎಸ್ ಸೇರಲು ಬಂದಿದ್ದರು. ನಾನೇ ತಡೆದಿದ್ದೆ. ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ ಎಂದಿದ್ದೆ. ನಾನು ಕೈಜೋಡಿಸಿದ ಕಾರಣಕ್ಕೇ ಆಗ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಇಲ್ಲದೇ ಹೋದರೆ, ಯಡಿಯೂರಪ್ಪ ರಾಜಕೀಯವಾಗಿ ನಿರ್ನಾಮವಾಗುತ್ತಿದ್ದರು. ವಿಜಯೇಂದ್ರ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ಬ್ರಿಟಿಷರಂತೆ ಕುಮಾರಸ್ವಾಮಿ ಒಡೆದು ಆಳುತ್ತಾರೆ ಎಂಬ ಸಚಿವ ಆರ್.ಅಶೋಕ ಮಾತಿಗೆ ಪ್ರತಿಕ್ರಿಯಿಸಿದ ಅವರು, ಒಡೆದು ಆಳುವುದು ಬಿಜೆಪಿ ಗುಣ. ಜೆಡಿಎಸ್‌ನದು ಒಗ್ಗೂಡಿಸುವ ಗುಣ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯಕ್ಕೆ ಕೊಡುಗೆ ನೀಡಿದ ಸಾಕಷ್ಟು ಜನ ಶಿವಮೊಗ್ಗದಲ್ಲಿದ್ದಾರೆ. ಅವರ ಹೆಸರು ನೆನಪಾಗಲಿಲ್ಲವೇ ಎಂದರು. ಬಿಜೆಪಿ ಸಿಎಂ ಬಗ್ಗೆ ಮಾತನಾಡಲು ನಾನಾರೂ ಅಲ್ಲ, ಆದರೆ, ಮುಂದೆ ರಾಜ್ಯದ ಜನರ ಸಂಕಷ್ಟದ ಬಗ್ಗೆ ನನಗೆ ಆತಂಕವಾಗುತ್ತಿದೆ ಎಂದು ನಾನು ಮಾತನಾಡಿದ್ದೇನೆ ಎಂದರು.

ಭಟ್ಕಳದಲ್ಲಿ ಮಾತನಾಡಿದ ಅವರು, ಸರ್ಕಾರ ಬಂದರೆ ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ದೊರೆಯಲು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದಿದ್ದೇನೆ. ಮೀನುಗಾರರಿಗೆ ಆದ್ಯತೆ ನೀಡಲಿದ್ದು, ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲಿದ್ದೇನೆ ಎಂದರು. ಎರಡನೇ ಪಟ್ಟಿಯಲ್ಲಿ ಕಾರವಾರ, ಹಳಿಯಾಳ, ಶಿರಸಿ, ಯಲ್ಲಾಪುರ ಕ್ಷೇತ್ರಗಳ ಪಟ್ಟಿಯನ್ನು ಅಕೈರು ಮಾಡಲಿದ್ದೇನೆ. ತಿಂಗಳ ನಂತರ ಇನ್ನೊಮ್ಮೆ ಜಿಲ್ಲೆಯ ಪ್ರವಾಸಕ್ಕೆ ಬರಲಿದ್ದೇನೆ ಎಂದರು.


ವೆಸ್ಟ್ ಎಂಡ್ ಹೋಟೆಲ್ ಯಾತ್ರೆ
ಕುಮಾರಸ್ವಾಮಿ ವೆಸ್ಟ್ ಎಂಡ್ ಹೋಟೆಲ್ ಯಾತ್ರೆ ಹೇಳಿದರೆ ಬೇಕಾದಷ್ಟಾಗುತ್ತದೆ. ಅವರು ತಮ್ಮ ಚಟ ಬಿಟ್ಟು ನಂತರ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ. ಬನವಾಸಿಯ ಅಂಡಗಿಯಲ್ಲಿ ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿ ಅವರು,
ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ಹೇಳಿಕೆ ಸಮರ್ಥನೆಗೆ ಪ್ರತಿಕ್ರಿಯೆ ನೀಡಿದ ಪಾಟೀಲ, ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಬೇಕು, ತಲೆ ಸರಿ ಇರಬೇಕು. ಹಾಗಿದ್ದರೆ ಚುನಾವಣೆಯಲ್ಲಿ ಗೆದ್ದು ಬಂದು ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ನಮ್ಮ ಪಕ್ಷದ ಮುಖ್ಯಮಂತ್ರಿ ನಿರ್ಧರಿಸೋಕೆ ಕುಮಾರಸ್ವಾಮಿ ಯಾರು? ಎಂದು ಪ್ರಶ್ನಿಸಿದರು.