ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದಂತೆ ಸ್ಟಾರ್ ಪ್ರಚಾರಕರ ಬೆನ್ನು ಬಿದ್ದಿರುವ ಅಭ್ಯರ್ಥಿಗಳು ಶತಾಯಗತಾಯ ಸ್ಟಾರ್‌ಗಳ ಮೂಲಕ ರೋಡ್ ಶೋ ನಡೆಸುವ ಕಸರತ್ತು ಆರಂಭಿಸಿದ್ದಾರೆ. ನೆರೆಯ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಸಿನಿ ನಟರ ಪ್ರವೇಶವಾಗಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ನಟ ಸುದೀಪ್ ರಂಗಪ್ರವೇಶ ಮಾಡುತ್ತಿದ್ದು, ಜಿಲ್ಲೆಯಲ್ಲಿ ಹೈವೋಲ್ಟೆಜ್ ಸೃಷ್ಟಿಯಾಗಿದೆ.
ಬಿಜೆಪಿ ಖಾತೆ ತೆರೆವ ಕಸರತ್ತು: ಜೆಡಿಎಸ್-ಕಾಂಗ್ರೆಸ್ ಸಮಬಲವಿರುವ ಜಿಲ್ಲೆಯ ನಾಲ್ಕೂ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ನಾಯಕರ ಮೊರೆ ಹೋಗಿರುವ ಅಭ್ಯರ್ಥಿಗಳು ಸಿನಿಮಾ ನಟರ ಹಿಂದೆಯೂ ಬಿದ್ದಿದ್ದಾರೆ. ಕಳೆದ ವಾರ ಕನ್ನಡ ಚಿತ್ರರಂಗದ ನಟರೊಬ್ಬರನ್ನು ಕರೆತರಲು ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಕಡೇ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು. ಇದಾದ ಬಳಿಕ ಮೊದಲ ಬಾರಿಗೆ ಚಿತ್ರನಟ ಸುದೀಪ್ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಶನಿವಾರ ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ನಗರದಲ್ಲಿ ಸುದೀಪ್ ರೋಡ್ ಶೋ ಪ್ಲಾನ್ ಸಿದ್ಧವಾಗಿದೆ.
ಷಾ ರೋಡ್ ಶೋಗೆ ಮಳೆರಾಯ ಅಡ್ಡಿ: ಬಿಜೆಪಿಯ ಚಾಣಕ್ಯ ಕೇಂದ್ರ ಗೃಹಸಚಿವ ಅಮಿತ್ ಷಾ ಮೂಲಕ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಭಾಗದಲ್ಲಿ ಬೃಹತ್ ರೋಡ್ ಶೋ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಅಮಿತ್ ಷಾ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರೂ ಏಕಾಏಕಿ ಸುರಿದ ಮಳೆಯ ಕಾರಣದಿಂದ ರೋಡ್ ಶೋ ರದ್ದುಪಡಿಸಲಾಯಿತು. ಆದರೆ ಇದಕ್ಕೂ ಮೊದಲು ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಿದ್ದರು. ನಟಿ ಶ್ರುತಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿ ತಾರಾಮೆರುಗು ನೀಡಿದ್ದರು. ಇದಕ್ಕೂ ಮೊದಲು ಕೆಲವು ನಾಯಕರನ್ನು ಕರೆತರಲಾಗಿದ್ದರೂ ಬಿಜೆಪಿ ಪಾಳಯಕ್ಕೆ ಹೇಳಿಕೊಳ್ಳುವಷ್ಟು ಲಾಭವಾಗಲಿಲ್ಲ. ಉಳಿದಿರುವ ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ನಾಯಕರನ್ನಾದರೂ ಕರೆತರಬೇಕೆಂಬ ಹಠಕ್ಕೆ ಬಿದ್ದಿರುವ ಅಭ್ಯರ್ಥಿಗಳು ಇದಕ್ಕಾಗಿ ಬೆವರು ಹರಿಸುತ್ತಿದ್ದಾರೆ.
ಪ್ರಿಯಾಂಕಾ ಕಮಾಲ್: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಮುಖ ಸ್ಟಾರ್ ಪ್ರಚಾರಕರಾಗಿ ಗಮನ ಸೆಳೆದಿದ್ದರು. ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದ ಡಿಕೆಶಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಇದಾಗ ಬಳಿಕ ಹೆಚ್ಚು ಸದ್ದು ಮಾಡಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಹೊಸಕೋಟೆಯಲ್ಲಿ ಭರ್ಜರಿ ಮತಪ್ರಚಾರ ನಡೆಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್‌ಗಾಂಧಿ ಮತ್ತಿತರ ನಾಯಕರನ್ನು ಕರೆತರುವ ಪ್ರಯತ್ನ ನಡೆದರೂ ಸಮಯದ ಅಭಾವದಿಂದ ಕಾಂಗ್ರೆಸ್ಸಿಗರಿಗೆ ಸ್ಟಾರ್ ಪ್ರಚಾರಕರನ್ನು ಕರೆತರಲು ಸಾಧ್ಯವಾಗಲಿಲ್ಲ.
ಎಚ್‌ಡಿಕೆ, ಎಚ್‌ಡಿಡಿ ಅಬ್ಬರ: ಚುನಾವಣೆ ೋಷಣೆಗೂ ಮೊದಲು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜನತಾಜಧಾರೆ ಮೂಲಕ ಹೆಚ್ಚು ಸದ್ದು ಮಾಡಿದ್ದ ಜೆಡಿಎಸ್ ನಂತರದಲ್ಲಿ ಪಂಚರತ್ನ ಯಾತ್ರೆಯ ಮೂಲಕವೂ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋಲಿಸಿದರೆ ಜೆಡಿಎಸ್‌ನ ಸ್ಟಾರ್ ಪ್ರಚಾರಕರು ಅಭ್ಯರ್ಥಿಗಳ ಪರ ದೊಡ್ಡಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಂತರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರೋಡ್ ಶೋ ಮೂಲಕ ಅಬ್ಬರಿಸಿದ್ದಾರೆ. ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಮೂರು ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಜೆಡಿಎಸ್ ಈ ಬಾರಿ ಶತಾಯಗತಾಯ ಮೂರೂ ಕ್ಷೇತ್ರವನ್ನು ವಶಕ್ಕೆ ಪಡೆಯಲೆಬೇಕೆಂಬ ಹಠಕ್ಕೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಗ್ರಾಮಾಂತರ ಜಿಲ್ಲೆ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಕಂಡುಬಂದಿದೆ.