ಜಿಲ್ಲೆ

ಸ್ಕ್ಯಾನಿಂಗ್ ಕೇಂದ್ರಕ್ಕೆ ಹಠಾತ್ ಭೇಟಿಗೆ ನಿರ್ಧಾರ

ಬೀದರ್: ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಸಂಬಂಧ ಸ್ಕ್ಯಾನಿಂಗ್ ಕೇಂದ್ರ, ನರ್ಸಿಂಗ್ ಹೋಮ್ ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲು ಭ್ರೂಣ ಪತ್ತೆ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ, ಹೆಚ್ಚಿನ ವಿದ್ಯಾವಂತರೇ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಿದ್ದಾರೆ. ಇದು ಕಳವಳಕಾರಿ ಸಂಗತಿ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ ಸದಸ್ಯರು, ಅನಿರೀಕ್ಷಿತ ಭೇಟಿ ನೀಡಿ ಇದಕ್ಕೆ ತಡೆಯೊಡ್ಡಬೇಕು ಎಂದು ನಿರ್ಧರಿಸಿದರು.

ಜಿಲ್ಲೆಯ ನಾಲ್ಕು ಕಡೆಗಳಲ್ಲಿ ದಿಢೀರ್ ದಾಳಿ ನಡೆಸಬೇಕು. ಕೆಲವೊಂದು ಔಷಧ ಅಂಗಡಿ ಮೇಲೆಯೂ ದಾಳಿ ನಡೆಸಿ ಯಾವ ಯಾವ ಔಷಧ ನೀಡುತ್ತಿದ್ದಾರೆ, ದಾಸ್ತಾನು ಏನಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಮಕ್ಕಳ ತಜ್ಞ ಡಾ. ಸಿ. ಆನಂದರಾವ್ ಮಾತನಾಡಿ, ಸ್ಕ್ಯಾನಿಂಗ್ ಸೆಂಟರ್ ನಡೆಸಲು ನಿಯಮಾವಳಿಯಂತೆ ಪ್ರಮಾಣಪತ್ರ ಇರಬೇಕು. ಫಲಕ ಹಾಕಿರಬೇಕು. ಆದರೆ ಕೆಲವರು ಈ ನಿಯಮಗಳ ಪಾಲನೆ ಮಾಡುತ್ತಿಲ್ಲ ಎನ್ನುವ ದೂರುಗಳಿವೆ. ಹೀಗಾಗಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ಸತ್ಯಾಂಶ ಗೊತ್ತಾಗಲಿದೆ ಎಂದು ಸಲಹೆ ನೀಡಿದರು.

ಡಿಎಚ್ಒ ಡಾ.ವಿ.ಜಿ.ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಪಿಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಪರಿಣಾಮಕಾರಿ ಜಾರಿಗೊಳಿಸಲು ಒತ್ತು ಕೊಡಬೇಕು. ಭ್ರೂಣ ಹತ್ಯೆ ತಡೆ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಗೋಡೆ ಬರಹ ಮಾಡಿಸಬೇಕು. ಹೆಣ್ಣು ಮಗುವಿಗೆ ಗೌರವ ಸಿಗುವ ನಿಟ್ಟಿನಲ್ಲಿ ನಗರದ ಯಾವುದಾದರೊಂದು ವೃತ್ತಕ್ಕೆ ಬೇಟಿ ಸರ್ಕಲ್ ಎಂದು ಹೆಸರಿಡಲು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ ಸಿರಸಗಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಎಫ್.ಪಿ.ಎ.ಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಇತರರಿದ್ದರು.