ಜಿಲ್ಲೆ

ಸ್ಕೌಟ್ಸ್ ಮತ್ತು ಗೈಡ್ಸ್‌ನ ವಾರ್ಷಿಕ ಮಹಾಸಭೆ

ಮಡಿಕೇರಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಡಾ.ಸತೀಶರವರ ಅಧ್ಯಕ್ಷತೆಯಲ್ಲಿ ನಗರದ ಸ್ಕೌಟ್ ಗೈಡ್ ಭವನದಲ್ಲಿ ನಡೆಯಿತು.


ಹಿಂದಿನ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ಎಂ.ಎಂ.ವಸಂತಿ ಮಂಡಿಸಿದರು. ಜಿಲ್ಲಾ ಸಂಘಟಕಿ ಸಿ.ದಮಯಂತಿ ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ಓದಿದರು. ೨೧-೨೨ನೇ ಸಾಲಿನ ಲೆಕ್ಕಪತ್ರವನ್ನು ಖಜಾಂಚಿ ಪುಷ್ಪವೇಣಿ ಮಂಡಿಸಿದರು.


ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಸಹಾಯ ಮಾಡಿದ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಘಟಕದ ವ್ಯವಸ್ಥಾಪಕಿ ಗೀತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಅಧೀಕ್ಷಕ ಡಾ.ಸದಾಶಿವ ಪಲ್ಲೇದ್‌ರನ್ನು ಸನ್ಮಾನಿಸಲಾಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಬಹಳ ಉತ್ತಮ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.


ಗೀತಾ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುರಿತು ಮೊದಲು ನನಗೆ ಏನು ತಿಳಿದಿರಲಿಲ್ಲ. ನಾನು ಇಂಜಿನಿಯರ್ ಮುಗಿಸಿ ಉನ್ನತ ಹುದ್ದೆಗೆ ಸೇರಿದ ನಂತರ ಸ್ಕೌಟಿಂಗ್ ಮತ್ತು ಗೈಡಿಂಗ್ ತಿಳಿದುಕೊಂಡಿದ್ದೇನೆ. ಈ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣನಡತೆ, ಶಿಸ್ತು, ಸಂಯಮ ಕಂದುಬರುತ್ತಿದೆ.


ಸಭೆಯಲ್ಲಿ ಕಬ್ ವಿಭಾಗದಲ್ಲಿ ಉನ್ನತ ತರಬೇತಿ ಪಡೆದ ಕಡಗದಾಳುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತಿ ಕುಮಾರಿ, ಗೈಡ್ ವಿಭಾಗದಲ್ಲಿ ಉನ್ನತ ತರಬೇತಿ ಪಡೆದ ಚೆನ್ನನ ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಬಿ ಜಾಜಿರವರಿಗೆ ರಾಷ್ಟ್ರೀಯ ಸಂಸ್ಥೆಯಿಂದ ಬಂದಿರುವ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಸಬ್ ಕ್ಯಾಂಪ್ ಚೀಫ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮೈಥಲಿ ರಾವ್ ರವರಿಗೆ ರಾಜ್ಯ ಸಂಸ್ಥೆಯಿಂದ ನೀಡಿದ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.


ಜಿಲ್ಲಾಧಿಕಾರಿಗಳು ಮಾತನಾಡಿ, ದೇಶಿಯ ಆಟಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡರೆ ಉತ್ತಮವಾಗುತ್ತದೆ ಎಂದು ಸಲಹೆ ನೀಡಿದರು. ಪ್ರತಿಕ್ರಿಯಿಸಿದ ಜಿಮ್ಮಿ ಸಿಕ್ವೇರಾರವರು, ರಾಜ್ಯ ಸಂಸ್ಥೆಯ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಗೈಡ್ ಆಯುಕ್ತ ಬಿಬಿ ಸಾವಿತ್ರಿ, ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ರಾಣಿ ಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ಸ್ಥಾನಿಕ ಆಯುಕ್ತ ರಾದ ಎಚ್.ಆರ್.ಮುತ್ತಪ್ಪ, ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ಭಾಗವಹಿಸಿದ್ದರು.