ಜಿಲ್ಲೆ

ಸ್ಕೇಟಿಂಗ್​ನಿಂದ ಉತ್ತಮ ಆರೋಗ್ಯ ಸಾಧ್ಯ

ಶಿರಸಿ: ಸ್ಕೇಟಿಂಗ್​ನಂಥ ದೈಹಿಕ ಸಾಮರ್ಥ್ಯದ ಕ್ರೀಡೆಗಳಿಂದ ಮಕ್ಕಳು ಉತ್ತಮ ಆರೋಗ್ಯ ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದ ಅದ್ವೈತ ಸ್ಕೇಟಿಂಗ್ ರಿಂಕ್​ನಲ್ಲಿ ಶನಿವಾರ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಮಕ್ಕಳಿಗೆ ಸೂಕ್ತ ಅವಕಾಶ ಸಿಕ್ಕರೆ ತಮ್ಮ ಪ್ರತಿಭೆ ಅನಾವರಣಗೊಳಿಸುವ ಸಾಮರ್ಥ್ಯವಿದೆ. ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ತರಬೇತಿ ಕೊಡಿಸುವ ಕಾರ್ಯ ಪಾಲಕರಿಂದ ಆಗಬೇಕು ಎಂದರು.

ಈ ಸಮಯದಲ್ಲಿ ನೂರಕ್ಕೂ ಹೆಚ್ಚಿನ ಸ್ಕೇಟಿಂಗ್ ಕ್ರೀಡಾಪಟುಗಳು ಸ್ಕೇಟಿಂಗ್ ಕವಾಯತ್ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸ್ಕೇಟಿಂಗ್ ಕ್ಲಬ್ ಅಧ್ಯಕ್ಷ ಕಿರಣಕುಮಾರ, ವಿಶ್ವನಾಥ ಕುಡಾಳಕರ, ಕರ್ನಾಟಕ ತಂಡದ ತರಬೇತುದಾರ ದಿಲೀಪ್ ಹಣಬರ್, ರೋಷನ್ ಪಾಲೇಕರ್, ಶ್ಯಾಮಸುಂದರ, ಪಯಣ ಪ್ರವಾಸೋದ್ಯಮ ಸಂಸ್ಥೆ ಕಾರ್ಯದರ್ಶಿ ಪರಮೇಶ್ವರ ಹಾಗೂ ಮಕ್ಕಳ ಪಾಲಕರು ಇದ್ದರು.