ಜಿಲ್ಲೆ

ಸ್ಕೂಟರ್ ಕಳ್ಳತನ ತಡೆಯಲೆತ್ನಿಸಿದವನ ಮೇಲೆ ಚಾಕುವಿನಿಂದ ಹಲ್ಲೆ

ಪಾಂಡವಪುರ: ಪಟ್ಟಣದ ಬೀರಶೆಟ್ಟಹಳ್ಳಿಯಲ್ಲಿ ಭಾನುವಾರ ರಾತ್ರಿ ಸ್ಕೂಟರ್ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರಿಗೆ ತಡೆಯೊಡ್ಡಿದ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

ಪಟ್ಟಣದ ಬೀರಶೆಟ್ಟಹಳ್ಳಿ ನಿವಾಸಿ ಧರ್ಮಣ್ಣ ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ. ಗ್ರಾಮದ ಮಾರಮ್ಮ ದೇವಸ್ಥಾನದ ಮುಂಭಾಗದ ಗಲ್ಲಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಸ್ಕೂಟರನ್ನು ಭಾನುವಾರ ತಡರಾತ್ರಿ 1.30ರಲ್ಲಿ ನಾಲ್ವರು ಖದೀಮರ ತಂಡ ಕಳ್ಳತನದಿಂದ ತಳ್ಳಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದ ವೇಳೆ ಎಚ್ಚರಗೊಂಡ ಮನೆಯ ಮಾಲೀಕ ಧರ್ಮಣ್ಣ ಖದೀಮರನ್ನು ತಡೆದಿದ್ದಾರೆ. ಈ ವೇಳೆ ಖದೀಮರು ಹರಿತವಾದ ಚಾಕುವಿನಿಂದ ಹಲ್ಲೆ ನಡೆಸಿ ಸ್ಕೂಟರ್ ಕದ್ದೊಯ್ಯಲು ಪ್ರಯತ್ನಿಸಿದ್ದಾರೆ. ಇದರಿಂದ ಧರ್ಮಣ್ಣ ಅವರಿಗೆ ಭುಜ ಮತ್ತು ಎದೆ ಭಾಗ ಸೇರಿದಂತೆ ದೇಹದ ಮೂರ‌್ನಾಲ್ಕು ಕಡೆ ಗಾಯವಾಗಿದೆ. ಗಾಯಗೊಂಡರು ವಿಚಲಿತರಾಗದ ಧರ್ಮಣ್ಣ, ಪ್ರತಿರೋಧ ಒಡ್ಡಿದಾಗ ಖದೀಮರು ಸ್ಕೂಟರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಗಾಯಗೊಂಡಿದ್ದ ಧರ್ಮಣ್ಣ ಅವರು ಪಟ್ಟಣ್ಣದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಜಯಂತಿನಗರದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಎದುರಿನಲ್ಲಿ ಒಂಟಿ ಮನೆಯಲ್ಲಿ ಶನಿವಾರ ದರೋಡೆ ನಡೆಸಲು ಯತ್ನಿಸಿದ ಖದೀಮ ಮನೆಯ ಯಜಮಾನ ರಮೇಶ್ ಎಂಬಾತನನ್ನು ಮರ ಕುಯ್ಯುವ ಯಂತ್ರದಿಂದ ಕೊಲೆಗೈದು ಆತನ ಪತ್ನಿ ಯಶೋಧಮ್ಮ ಎಂಬುವರನ್ನು ಗಾಯಗೊಳಿಸಿದ್ದ ವಿಚಾರ ಮಾಸುವ ಮುನ್ನವೇ ಪಟ್ಟಣದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ನಡೆದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಸ್ಥಳಕ್ಕೆ ಶಾಸಕ ದರ್ಶನ್ ಭೇಟಿ ಪರಿಶೀಲನೆ: ಸ್ಥಳೀಯರಿಂದ ವಿಚಾರ ತಿಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರು ಮತ್ತು ಲಭ್ಯವಿದ್ದ ಸಿಸಿ ಕ್ಯಾಮರಾ ಫೂಟೇಜ್‌ಗಳನ್ನು ಪರಿಶೀಲಿಸಿ ಗ್ರಾಮಸ್ಥರಿಗೆ ಧೈರ್ಯ ಹೇಳಿದರು.

ಪೊಲೀಸರಿಗೆ ತರಾಟೆ: ಪಾಂಡವಪುರ ತಾಲೂಕಿನಲ್ಲಿ ದರೋಡೆ ಯತ್ನ, ಕಳ್ಳತನ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಇಂತಹದೇ ಪ್ರಕರಣ ಜಯಂತಿನಗರದಲ್ಲಿ ನಡೆದಿದೆ. ಪೊಲೀಸ್ ಇಲಾಖೆ ಏನೂ ಮಾಡುತ್ತಿದೆ. ಆನರಿಗೆ ಸೂಕ್ತ ರಕ್ಷಣೆ ಕೊಡಬೇಕು. ನಡೆದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಆರ್.ವಿವೇಕಾನಂದ, ಗ್ರಾಮಸ್ಥರಾದ ನಾಗೇಂದ್ರ, ಮಧು, ಮನು, ದಿಲೀಪ ಇತರರು ಇದ್ದರು.