ಯಾದಗಿರಿ: ಜಿಲ್ಲೆಯು ಹಿಂದು ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾಗಿದ್ದು ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಸಲಹೆ ನೀಡಿದರು.
ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸಂಜೆ ಹಬ್ಬದ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಿತ ಮೂರ್ತಿಗಳನ್ನು ಪ್ರತಿಷ್ಠಾಪಿಸದೆ, ಪರಿಸರ ಸ್ನೇಹಿ ವಿಗ್ರಹಗಳನ್ನು ಸ್ಥಾಪಿಸಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸಮಾಜದ ಎಲ್ಲ ಭಾಂದವರು ಭಾವೈಕ್ಯತೆಯಿಂದ ಮತ್ತು ಸಂತಸದಿಂದ ಈ ಹಬ್ಬ ಆಚರಿಸಬೇಕು ಎಂದರು.
ಯಾವುದೇ ಒಂದು ಕೋಮಿಗೆ ನೋವಾಗದ ರೀತಿಯಲ್ಲಿ ಡಿಜೆ ಧ್ವನಿವರ್ಧಕಗಳನ್ನು ಬಳಸದೇ ಭಕ್ತಿ ಭಾವದಿಂದ ಆಚರಿಸಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಸಾಂಸ್ಕೃತಿಕ ಮತ್ತು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಹಿರಿಯ ನಾಗರಿಕರು, ಮಕ್ಕಳು, ಪ್ರಾಣಿಗಳಿಗೆ ತೊಂದರೆಯಾಗದಂತೆ ನಿಗಾವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ತಿಳಿಸಿದರು.
ಗಣೇಶನ ಪ್ರತಿಮೆಯನ್ನು ರಸ್ತೆ ಮಧ್ಯದಲ್ಲಿ ಕೂಡಿಸಿ ಇತರರಿಗೆ ತೊಂದರೆ ಮಾಡಬಾರದು. ಸಣ್ಣ ಪುಟ್ಟ ಗಣೇಶನ ಪ್ರತಿಮೆಯನ್ನು ಹೊರತು ಪಡಿಸಿ, ಉಳಿದ ಎಲ್ಲರೂ ತಪ್ಪದೇ ಪೂರ್ವ ಪರವಾನಿಗೆಯನ್ನು ತಹಸೀಲ್ದಾರರ ನೇತೃತ್ವದಲ್ಲಿ ಪೊಲೀಸ್, ಜೆಸ್ಕಾಂ ಇಲಾಖೆ, ನಗರ ಸಭೆ, ಹಾಗೂ ಅಗ್ನಿ ಶಾಮಕ ದಳದಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪರವಾನಿಗೆ ಕುರಿತು ಏಕಗವಾಕ್ಷಿ ವ್ಯವಸ್ಥೆಯನ್ನು ನಗರ ಪೊಲೀಸ್ ಠಾಣೆ, ಆಯಾ ತಾಲೂಕು ಕೇಂದ್ರಗಳು ಮತ್ತು ಗ್ರಾಮಗಳಲ್ಲಿ ಅರ್ಜಿಸಲ್ಲಿಸಿದ ಪೊಲೀಸ್ ಇಲಾಖೆ ಪರವಾನಿಗೆ ನೀಡುವ ವ್ಯವಸ್ಥೆ ಮಾಡಲು ಸಂಬಂಸಿದ ಅಕಾರಿಗಳಿಗೆ ನಿರ್ದೇಶನ ನೀಡಿದರು.