ಹನೂರು: ಜಗತ್ತಿನ ಎಲ್ಲ ಮನುಷ್ಯರೂ ಪರಸ್ಪರ ಪ್ರೀತಿ- ವಿಶ್ವಾಸ, ಸ್ನೇಹ- ಸೌಹಾರ್ದತೆ ಹಾಗೂ ಶಾಂತಿಯುತವಾಗಿ ಬಾಳುವುದೇ ನಿಜವಾದ ಧರ್ಮ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹರಿಹರಪುರ ಶ್ರೀ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಸುಳ್ವಾಡಿ ಗ್ರಾಮದ ಶ್ರೀ ಭ್ರಮ್ಮೇಶ್ವರ ದೇಗುಲದ ಆವರಣದಲ್ಲಿ ಗುರುವಾರ ಸನಾತನ ಹಿಂದು ಸಮಾಜ ಪರಿಷತ್ ವತಿಯಿಂದ ಸಮಾನ ಸಂಸ್ಕಾರ ಹಾಗೂ 77 ಮಲೆಯ ಸಂರಕ್ಷಣಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪರಿಸರ ಉಳಿಸಿ ಸನಾತನ ಸಂಸ್ಕೃತಿ ರಕ್ಷಿಸಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಧರ್ಮ ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ನಮ್ಮ ಪೂರ್ವಿಕರು ಅನಾದಿ ಕಾಲದಿಂದಲೂ ಧಾರ್ಮಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದರ ಮೂಲಕ ಅನೇಕ ದೇವರುಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ. ಹಾಗಾಗಿ ಭಾರತೀಯ ಸನಾತನ ಧರ್ಮ ತನ್ನದೇಯಾದ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಧರ್ಮ, ಸಂಸ್ಕೃತಿ ರಕ್ಷಿಸಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತರಾಗಬೇಕು. ವಸುದೈವ ಕುಟುಂಬಕಂ ಎಂಬ ತತ್ವ ಅರಿತು ಪರಸ್ಪರ ವಿಶ್ವಾಸದಿಂದ ಕೂಡಿ ಬಾಳಬೇಕು, ಇದುವೇ ನಿಜವಾದ ಧರ್ಮ. ಹಾಗಾದರೆ ಮಾತ್ರ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ವೃದ್ಧಿಸಲಿದೆ ಎಂದರು.
ಮನುಷ್ಯ ಧರ್ಮ ಪಾಲಿಸಿ: ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ಒಂದು ಕುಟುಂಬದೊಳಗೆ ವಾಸಿಸುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಬಾಳಿ ಬದುಕಬೇಕು. ಈ ದಿಸೆಯಲ್ಲಿ ಮನುಷ್ಯ ಮನುಷ್ಯ ಧರ್ಮ ಪಾಲಿಸಿದರೆ ಖಂಡಿತ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಜತೆಗೆ ಶಾಂತಿ, ನೆಮ್ಮದಿಯೂ ಸಿಗುತ್ತದೆ. ಇಲ್ಲವಾದಲ್ಲಿ ಶಾಂತಿಯನ್ನು ಹುಡುಕಿಕೊಂಡು ಹೋಗಬೇಕಾದ ಸ್ಥಿತಿ ಎದುರಾಗುತ್ತದೆ. ಆದ್ದರಿಂದ ಜನನ, ಮರಣದ ನಡುವೆ ಬದುಕುವ ಸುದೀರ್ಘ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕಿದೆ. ಇದರಿಂದ ಆಯಸ್ಸು ಸಹ ವೃದ್ಧಿಸಲಿದೆ ಎಂದು ಕಿವಿಮಾತು ಹೇಳಿದರು.
ಚಿತ್ರದುರ್ಗ ಮಾದಾರ ಚೆನ್ನಯ್ಯ ಸಂಸ್ಥಾನ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಸನಾತನ ಹಿಂದು ಸಮಾಜ ಪರಿಷತ್‌ನ ಪದಾಧಿಕಾರಿಗಳು, ಸುತ್ತಮುತ್ತಲ ಗ್ರಾಮದ ಜನರು ಭಾಗವಹಿಸಿದ್ದರು.